ಬೆಳಗಾವಿ: ಕಬ್ಬು ದರ ನಿಗದಿಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಅದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಬ್ಬಿಗೆ ರಿಕವರಿ ಹೆಚ್ಚಿದೆ. ಹೀಗಾಗಿ ಅಲ್ಲಿ ದರ ಹೆಚ್ಚು ಕೊಡಲಾಗುತ್ತಿದೆ. ಮಹಾರಾಷ್ಟ್ರ ಮಾದರಿಯಲ್ಲೇ ನಾವು ದರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿಯವರು ಭಾಗವಹಿಸಿ ರಸ್ತೆ ಮೇಲೆ ಮಲಗುತ್ತಿದ್ದಾರೆ. ಇದರ ಬದಲು ಕೇಂದ್ರ ಬಳಿ ಹೋಗಿ ರೈತರ ಸಮಸ್ಯೆ ಹೇಳಲಿ ಎಂದು ಹೇಳಿದರು.
ತೆರೆಮರೆಯಲ್ಲಿ ಸಕ್ಕರೆ ಸಚಿವರ ಗೌಪ್ಯ ಸಭೆ: ರೈತರ ಹೋರಾಟದ ಕಾವು ಹೆಚ್ಚಾಗುತ್ತಿದ್ದಂತೆ, ಕೊನೆಗೂ ಎಚ್ಚೆತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಬೆಳಗಾವಿಗೆ ದೌಡಾಯಿಸಿದ್ದಾರೆ. ಆದರೆ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಬದಲು, ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ.
ಸಭೆಯ ನಂತರ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, “ಸಕ್ಕರೆ ಕಾರ್ಖಾನೆಯವರು ಹೆಚ್ಚುವರಿ ಹಣ ಕೊಡಲು ಒಪ್ಪುತ್ತಿಲ್ಲ, ಈಗ ನೀಡುತ್ತಿರುವುದೇ ಹೆಚ್ಚು ಎನ್ನುತ್ತಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೆ ಸಿಎಂ ಗರಂ ಆಗಿದ್ದು, “ಮೊದಲು ರೈತರನ್ನು ಮನವೊಲಿಸಿ, ಪರಿಸ್ಥಿತಿ ಸರಿಪಡಿಸಿ ಬನ್ನಿ,” ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ರೈತರ ಆಕ್ರೋಶದ ಹಿನ್ನೆಲೆಯಲ್ಲಿ, ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ಸಚಿವರಿಗೆ ಸಿಎಂ ಸಲಹೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ನಾಳೆ (ನ. 7) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಖಾನೆ ಮಾಲೀಕರು ಮತ್ತು ಸಚಿವರ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ಸಭೆಯ ತೀರ್ಮಾನದ ಮೇಲೆ ರೈತರ ಮುಂದಿನ ನಡೆ ನಿರ್ಧಾರವಾಗಲಿದೆ.