ಕೋಲಾರ: ಸಚಿವ ಲಾಡ್ ಕಾರ್ಯಕ್ರಮ, ಬಾಡಿಗೆ ಆಟೋ ಚಾಲಕರ ಗಲಾಟೆ ನಂತರ ಬಟವಾಡೆ

0
43

ರೂಪೇಶ್‌ ಎಲ್‌.

ಕೋಲಾರ ನಗರದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನಡೆದ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು 400 ರೂ. ಬಾಡಿಗೆ ಫಿಕ್ಸ್ ಮಾಡಿದ್ದ ಅಂಶ ಬೆಳಕಿಗೆ ಬಂದಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಿದ್ದಿದ್ದರೆ ಹಣದ ಬಟವಾಡೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಕಾರ್ಯಕ್ರಮ ಮುಗಿದ ನಂತರವೂ ಗಂಟೆಗಟ್ಟಲೇ ಹಣ ಕೊಡದ ಪರಿಣಾಮವಾಗಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದರಿಂದಾಗಿ ಕಾರ್ಮಿಕ ಇಲಾಖೆಯು ಬಾಡಿಗೆಗೆ ಸಭಿಕರನ್ನು ಕರೆತಂದ ಅಂಶ ಬಟಾ ಬಯಲಾಯಿತು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಗವಹಿಸಿದ್ದ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮವನ್ನು ಸುಮಾರು ಒಂದೂವರೆ ಸಾವಿರ ಮಂದಿ ಕೂಡಬಹುದಾದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಸಚಿವರ ಕಾರ್ಯಕ್ರಮ ಕಲ‌ ಫುಲ್ ಆಗಿರಬೇಕು, ಗ್ರಾಂಡ್ ಆಗಿರಬೇಕು, ಸಭಿಕರು ತುಂಬು ತುಳುಕುತ್ತಿರಬೇಕು ಎಂಬ ಸೂಚನೆ ಇದ್ದ ಕಾರಣ ಕಾರ್ಮಿಕ ಇಲಾಖೆ ಅಧಿಕಾರಿಗಳು ಜನರನ್ನು ಜಮಾಯಿಸುವ ತಲೆಬಿಸಿಗೆ ತುತ್ತಾಗಿದ್ದರು.

ಇದಕ್ಕಾಗಿ ಆಟೋ ಚಾಲಕರ ಸಂಘಟನೆ ಕಡೆಯಿಂದ ನೂರಾರು ಆಟೋಗಳ ಸಮೇತ ಚಾಲಕರನ್ನು ಜಮಾಯಿಸುವ ಕಸರತ್ತು ಕಳೆದ ಎರಡು ದಿನಗಳಿಂದ ನಡೆಸಲಾಗಿತ್ತು. ಬೆಳಗ್ಗೆ ಒಂಬತ್ತು ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಆಟೋಗಳ ಸಮೇತ ಚಾಲಕರು ನಾರಾಯಣಿ ಕಲ್ಯಾಣ ಮಂಟಪದಲ್ಲಿ ಹಾಜರಿರಬೇಕು ಎಂಬ ಷರತ್ತಿಗೆ ಆಟೋ ಚಾಲಕರು ಸಹ 500 ಬಾಡಿಗೆಗೆ ಬೇಡಿಕೆ ಇರಿಸಿದ್ದರು. ಮಂಗಳವಾರ ದಿನವಿಡಿ ವ್ಯವಹಾರ ಕುದುರಿಸಿದ್ದ ಅಧಿಕಾರಿಗಳು ಕೊನೆಗೆ ಪ್ರತಿ ಆಟೋ ಚಾಲಕರಿಗೆ 400 ರೂ. ಬಾಡಿಗೆ ಫಿಕ್ಸ್ ಮಾಡಿದ್ದರು. ಇದರ ಜೊತೆಗೆ ಊಟ ಹಾಗೂ ಫುಡ್ ಕಿಟ್ ಕೊಡುವುದಾಗಿ ಸಹ ಭರವಸೆ ನೀಡಲಾಗಿತ್ತು.

ಬೆಳಗ್ಗೆ ಒಂಬತ್ತು ಗಂಟೆಗೆ ಶಿಸ್ತಾಗಿ ತಮ್ಮ ಆಟೋಗಳ ಸಮೇತ ಕಲ್ಯಾಣ ಮಂಟಪದ ಪರೇಡ್ ನಡೆಸಿದ ಆಟೋ ಚಾಲಕರು ಮಧ್ಯಾಹ್ನ 2ಗಂಟೆ ವೇಳೆಗೆ ಕಾರ್ಯಕ್ರಮ ಮುಗಿದ ತಕ್ಷಣ ಬಾಡಿಗೆ ಹಣ ವಸೂಲಿಗೆ ಮುಂದಾದರು. ಕಾರ್ಯಕ್ರಮ ಯಶಸ್ವಿಯಾದ ಗುಂಗಿನಲ್ಲಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಣ ಕೊಡುವುದನ್ನೇ ಮರೆತು ಹೋದರು.

“ಸಚಿವರ ಕಾರ್ಯಕ್ರಮ ಗ್ರಾಂಡ್ ಆಗಿ ಯಶಸ್ವಿಯಾದ ದಿನದ ಬಾಡಿಗೆ ಕಳೆದುಕೊಂಡು ಬೆಳಗ್ಗೆಯಿಂದ ಸಂಜೆವರೆಗೂ ಇಲ್ಲಿದ್ದೇವೆ. ಗುರುತಿನ ಕಾರ್ಡ್, ಫುಡ್ ಕಿಟ್, ಮಧ್ಯಾಹ್ನದ ಊಟ ಹಾಗೂ 400ರೂ. ಕೊಡುವುದಾಗಿ ನಮಗೆ ಭರವಸೆ ನೀಡಿದ್ದರು. ಇಲ್ಲಿ ಈಗ ನಮ್ಮನ್ನು ಕೇಳುವವರೇ ಇಲ್ಲ” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಟೋ ಚಾಲಕರು ಹೇಳಿದರು.

ಊಟ ಮಾಡಿಕೊಂಡು ಬಂದು ಹಣ ಪಡೆಯೋಣ ಎಂದು ಆಟೋ ಚಾಲಕರು ಊಟಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಸಮರ್ಪಕ ಆಹಾರವೂ ಸಿಗಲಿಲ್ಲ. ಫುಡ್ ಕಿಟ್ ಸುಳಿವೇ ಇರಲಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಾಡಿಗೆ ನಷ್ಟ ಮಾಡಿಕೊಂಡು ಕಾದು ಕುಳಿತರು ಏನೂ ಸಿಗಲಿಲ್ಲ ಎಂದು ಆಟೋ ಚಾಲಕರು ಕಲ್ಯಾಣ ಮಂಟಪದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಕೆಲವರಂತೂ ತಮ್ಮನ್ನು ಕರೆದುಕೊಂಡು ಬಂದ ಮುಖಂಡರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದುದು ಸಹ ಕಂಡು ಬಂತು. ಸಂಜೆ 4 ಗಂಟೆವರೆಗೂ ಕಾದರೂ ಹಣ ಕೊಡುವುದಾಗಿ ಹೇಳಿದ್ದವರ ಸುಳಿವೇ ಇಲ್ಲದಿದ್ದಾಗ ಹಿಡಿ ಶಾಪ ಹಾಕಿಕೊಂಡು ಶಾಲಾ ಮಕ್ಕಳನ್ನು ಕರೆದುಕೊಂಡು ಬರುವ ಜವಾಬ್ದಾರಿ ಹೊತ್ತಿದ್ದ ಆಟೋ ಚಾಲಕರು ಸ್ಥಳದಿಂದ ನಿರ್ಗಮಿಸಿದರು. ಪ್ರತಿಭಟನೆ ತೀವ್ರಗೊಂಡಾಗ ಅಧಿಕಾರಿಯೊಬ್ಬರು ಬಂದು ಹಣದ ಬಡಾವಣೆ ಮಾಡಿದರು.

Previous articleಧಾರವಾಡ: ನೇಪಾಳದಲ್ಲಿ ಹುಬ್ಬಳ್ಳಿ ಯಾತ್ರಿಕರು ಅತಂತ್ರ
Next articleನೇಪಾಳದ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ, ಯುವ ಪೀಳಿಗೆ ಹೊಸ ಆಶಾಕಿರಣ

LEAVE A REPLY

Please enter your comment!
Please enter your name here