ಮಡಿಕೇರಿ ದಸರಾ 2025; ಹೇಗೆ ನಡೆಯುತ್ತಿದೆ ತಯಾರಿ?

0
37

ಮಡಿಕೇರಿ ದಸರಾ 2025ರ ಸಿದ್ಧತೆಗಳು ನಡೆಯುತ್ತಿವೆ. ಮಡಿಕೇರಿ ಜನೋತ್ಸವ ದಸರಾವನ್ನು ಸಂಭ್ರಮ, ಸಡಗರ, ಸುರಕ್ಷತೆ ಹಾಗೂ ಸ್ವಚ್ಛತೆಯಿಂದ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಾಸಕ ಡಾ.ಮಂತರ್ ಗೌಡ, ನಗರಸಭೆ ಅಧ್ಯಕ್ಷ ಪಿ.ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್ ಇತರರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, “ಸಂಪ್ರದಾಯದಂತೆ ಹಿಂದಿನಿಂದ ನಡೆದುಕೊಂಡು ಬಂದಿರುವ ಮಡಿಕೇರಿ ದಸರಾವನ್ನು ವ್ಯವಸ್ಥಿತವಾಗಿ ಆಚರಿಸುವಂತಾಗಬೇಕು. ಸುರಕ್ಷತೆಗೆ ಒತ್ತು ನೀಡಬೇಕು. ಪ್ರತಿ ಮಂಟಪದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಕರಗ ಹಾಗೂ ದಶಮಂಟಪಗಳು ಸಾಗುವ ಮಾರ್ಗದ ಗುಂಡಿ ಮುಚ್ಚುವ ಕಾರ್ಯವಾಗಬೇಕು” ಎಂದರು.

“ಹಣ ಬಿಡುಗಡೆ ಸಂಬಂಧ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಭೇಟಿ ಮಾಡಲು ನಿಯೋಗ ಕರೆದುಕೊಂಡು ಹೋಗಲಾಗುತ್ತದೆ” ಎಂದು ಡಾ.ಮಂತರ್ ಗೌಡ ಹೇಳಿದರು.

“ವಿದ್ಯುತ್ ಮಾರ್ಗ ಸರಿಪಡಿಸುವುದು ಹಾಗೂ ಬೀಳುವ ಮರಗಳಿದ್ದಲ್ಲಿ ತೆರವುಗೊಳಿಸುವುದು ಮತ್ತಿತರ ಸಂಬಂಧ ಅರಣ್ಯ ಮತ್ತು ಸೆಸ್ಕ್ ಇಲಾಖೆಯವರು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮತ್ತೊಂದು ಸಭೆ ನಡೆಸಲಾಗುವುದು” ಎಂದು ಶಾಸಕರು ತಿಳಿಸಿದರು.

ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, “ಮಡಿಕೇರಿ ದಸರಾವು ನಾಡಿನ ಸಂಸ್ಕೃತಿ ಬಿಂಬಿಸುತ್ತದೆ. ಒಳ್ಳೆಯ ರೀತಿಯಲ್ಲಿ ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸುವುದು, ಮಹಿಳಾ, ಮಕ್ಕಳ, ಯುವ ಮತ್ತು ಕ್ರೀಡಾ ದಸರಾ ಆಚರಿಸುವುದು ಸೇರಿದಂತೆ ವಿವಿಧ ರೀತಿಯ ದಸರಾ ಆಚರಿಸುವುದು ವಿಶೇಷವಾಗಿದ್ದು, ಆ ದಿಸೆಯಲ್ಲಿ ಎಲ್ಲರೂ ಸಹಕರಿಸುವಂತೆ” ಕೋರಿದರು.

“ಮಡಿಕೇರಿ ದಸರಾದಲ್ಲಿ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸಿ ಕರಗ ಉತ್ಸವ ಮೂಲಕ ದಸರಾ ಆಚರಿಸುವುದು ವಿಶೇಷವಾಗಿದೆ. ವೇದಿಕೆ, ಬೆಳಕು, ಧ್ವನಿ ವ್ಯವಸ್ಥೆ ಹೀಗೆ ಹಲವು ರೀತಿಯ ಕಾರ್ಯಕ್ರಮಗಳು ಮಡಿಕೇರಿ ದಸರಾದಲ್ಲಿ ನಡೆಯುತ್ತಿರುವುದು ವಿಶೇಷ. ಆ ನಿಟ್ಟಿನಲ್ಲಿ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಮಡಿಕೇರಿ ದಸರಾಗೆ ಎಲ್ಲರೂ ಸಹಕರಿಸುವಂತೆ” ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, “ರಾತ್ರಿ ವೇಳೆಯಲ್ಲಿ ನಡೆಯುವ ಮಡಿಕೇರಿ ದಸರಾಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ಆ ನಿಟ್ಟಿನಲ್ಲಿ ಜನರ ಸುರಕ್ಷತೆ ಅತೀ ಮುಖ್ಯ. ಆಸ್ತಿ ಪಾಸ್ತಿ ಹಾನಿಯಾಗದಂತೆ ಗಮನಹರಿಸುವುದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ಸಾರಿಗೆ ಸಂಚಾರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಮತ್ತಿತರ ಕ್ರಮಗಳನ್ನು ಪೊಲೀಸ್ ಇಲಾಖೆ ವಹಿಸಲಿದೆ” ಎಂದು ಹೇಳಿದರು.

ದಶ ಮಂಟಪಗಳ ನಿರ್ಮಾಣ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಸುರಕ್ಷತೆಯ ಪ್ರಮಾಣ ಪತ್ರ ಪಡೆಯುವುದು ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಒತ್ತಿ ಹೇಳಿದರು. ದಶ ಮಂಟಪಗಳ ಪ್ರದರ್ಶನಕ್ಕೆ ತೆರಳುವಾಗ ಸುರಕ್ಷತೆ ಅತೀ ಮುಖ್ಯವಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಅನುಮತಿ ಪಡೆಯುವಂತಾಗಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ದಸರಾ ಸಮಿತಿಯ ಧನಂಜಯ ಮಾತನಾಡಿ, “ಹಿಂದಿನಿಂದಲೂ ದಶಮಂಟಪಗಳ ಸಂಬಂಧ ಆರ್‌ಟಿಒ ಕಚೇರಿಯಿಂದ ಅನುಮತಿ ಪಡೆದಿರುವುದಿಲ್ಲ. ಈ ಹಿಂದಿನಂತೆ ದಸರಾವನ್ನು ಆಚರಿಸಲು ಅವಕಾಶ ಮಾಡಬೇಕು” ಎಂದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, “ಮಂಟಪಗಳ ವೀಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಅನುಮತಿ ಬೇಡ. ಮಡಿಕೇರಿ ದಸರಾದ ವೈಭವ ಕಡಿಮೆ ಮಾಡುವುದು ಬೇಡ, ಹೆಚ್ಚಿನ ನಿಬಂಧನೆಗಳನ್ನು ಅಳವಡಿಸುವುದರಿಂದ ಮಡಿಕೇರಿ ದಸರಾ ವೈಭವಕ್ಕೆ ತೊಂದರೆಯಾಗಲಿದೆ” ಎಂದು ಹೇಳಿದರು.

Previous articleಬೆಂಗಳೂರು: 3000 ಬಿಎಂಟಿಸಿ ಬಸ್‌ಗಳ ವೇಳಾಪಟ್ಟಿ ಪರಿಷ್ಕರಣೆ
Next articleಧಾರವಾಡ, ಕೊಡಗು ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ, ವಿವರಗಳು

LEAVE A REPLY

Please enter your comment!
Please enter your name here