ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ಚುನಾವಣಾ ಆಯೋಗ ಈ ಆರೋಪವನ್ನು ತಳ್ಳಿ ಹಾಕಿದೆ.
ಈಗ ಕರ್ನಾಟಕ ಸರ್ಕಾರ ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿರುವ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ಆದೇಶಿಸಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ :26/2023 ಕಲಂ 182,419,464 465 ಐ.ಪಿ.ಸಿ. ರಂತೆ ದಾಖಲಾಗಿರುವ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಯಲ್ಲಿ ವಿಶೇಷ ತನಿಖಾ ತಂಡ (Special Investigation Team) ವನ್ನು ರಚಿಸುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.
ಮೇಲೆ ಓದಲಾದ ದಿನಾಂಕ:20/09/2025ರ ಪತ್ರದಲ್ಲಿ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ಇವರು ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ 6670 ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿದೆ ಎಂಬುದಾಗಿ ಚುನಾವಣಾ ಆಯೋಗಕ್ಕೆ ಮಾಜಿ ಶಾಸಕರಾಗಿದ್ದ ಶ್ರೀ. ಬಿ. ಆರ್. ಪಾಟೀಲ್ ರವರು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಈ ಕುರಿತಂತೆ ಪರಿಶೀಲಿಸಿದಾಗ ಒಟ್ಟು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ವಿವಿಧ ಸರ್ಕಾರಿ ಆನ್‌ಲೈನ್ ಅಪ್ಲಿಕೇಷನ್‌ಗಳಿಗೆ ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಪುರಸ್ಕರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದು ಕಂಡು ಬಂದಿರುತ್ತದೆ.
ಆದರೆ, 5994 ಅರ್ಜಿಗಳನ್ನು ಪರಿಶೀಲಿಸಿದಾಗ ಸದರಿ ಅರ್ಜಿಗಳನ್ನು ಯಾರೋ, ಯಾವುದೋ ದುರುದ್ದೇಶದಿಂದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಿ, ಮೂಲ ಮತದಾರರ ಗಮನಕ್ಕೆ ಬಾರದಂತೆ ಮತ್ತು ಗೊತ್ತಾಗದಂತೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿರುವ ಬಗ್ಗೆ ದೂರುದಾರರಾದ ಶ್ರೀಮತಿ ಮಮತಾ ಕುಮಾರಿ ಕೆ.ಎ.ಎಸ್ ರವರು ವಿಚಾರಣೆ ಮಾಡಿ ದಿನಾಂಕ: 21.02.2023 ರಂದು ನೀಡಿದ ದೂರಿನ ಆಧಾರದ ಮೇಲೆ ಕಲ್ಬುರ್ಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 26/2023 ಕಲಂ, 182, 419, 464, 465 ಐ.ಪಿ.ಸಿ ರಂತೆ ಪುಕರಣ ದಾಖಲಾಗಿರುವುದಾಗಿ ವರದಿ ಮಾಡಿರುತ್ತಾರೆ.
ಸದರಿ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಇತರೆ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ರಾಜ್ಯದ ಅಪರಾಧ ತನಿಖಾ ಸಂಸ್ಥೆಯಾದ ಸಿಐಡಿಯ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕಗಳು ರವರ ಮೇಲ್ವಿಚಾರಣೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಒಂದು ವಿಶೇಷ ತನಿಖಾ ತಂಡ (Special Investigation Team) ರಚಿಸುವುದು ಸೂಕ್ತವೆಂದು ಶಿಫಾರಸ್ಸು ಮಾಡಿ, ಸದರಿ ವಿಶೇಷ ತನಿಖಾ ತಂಡಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 2(ಯು) ಅಡಿಯಲ್ಲಿ ಪೊಲೀಸ್ ಠಾಣೆಯೆಂದು ಘೋಷಿಸಿ, ಕರ್ನಾಟಕ ರಾಜ್ಯ ಕ್ಷೇತ್ರ ವ್ಯಾಪ್ತಿಯನ್ನು ನೀಡುವಂತೆ ಮತ್ತು ವಿಶೇಷ ತನಿಖಾ ತಂಡವು ತನ್ನ ತನಿಖಾ ವರದಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ-193ರಡಿ ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸಲು ಅಧಿಕಾರ ನೀಡುವಂತೆ ಕೋರಿರುತ್ತಾರೆ.
ಎಸ್‌ಐಟಿ ತಂಡದ ಅಧಿಕಾರಿಗಳು
- ಬಿ.ಕೆ.ಸಿಂಗ್. ಐಪಿಎಸ್. ಮುಖ್ಯಸ್ಥರು, ಅಪರ ಪೊಲೀಸ್ ಮಹಾನಿರ್ದೇಶಕರು, ಸಿ.ಐ.ಡಿ, ಬೆಂಗಳೂರು.
- ಸೈದುಲು ಅದಾವತ್ ಐ.ಪಿ.ಎಸ್, ಸದಸ್ಯರು, ಪೊಲೀಸ್ ಅಧೀಕ್ಷಕರು, ಸಿ.ಸಿ.ಡಿ. ಸಿಐಡಿ, ಬೆಂಗಳೂರು.
- ಶುಭಾನ್ವಿತ ಐ.ಪಿ.ಎಸ್. ಸದಸ್ಯರು, ಪೊಲೀಸ್ ಅಧೀಕ್ಷಕರು, ಎಸ್.ಇ.ಡಿ.ಸಿ.ಐ.ಡಿ, ಬೆಂಗಳೂರು.
ಪ್ರಸ್ತಾವನೆಯನ್ನು ಪರಿಶೀಲಿಸಿ, ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿರುವ ಸಂಬಂಧ ಕಲಬುರಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ಸಂಖ್ಯೆ: 26/2023 ಕಲಂ 182, 419, 464, 465 ಐ.ಪಿ.ಸಿ ಪ್ರಕರಣದ ತನಿಖೆ ನಡೆಸಲು ಮೇಲ್ಕಂಡ ಅಧಿಕಾರಿಗಳನ್ನೊಳಗೊಂಡ ಸಿಐಡಿಯ ವಿಶೇಷ ತನಿಖಾ ತಂಡವನ್ನು ರಚಿಸುವುದು ಮತ್ತು ಸದರಿ ತನಿಖಾ ತಂಡಕ್ಕೆ ಠಾಣಾಧಿಕಾರವನ್ನು ಮತ್ತು ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸಲು ಅಧಿಕಾರ ನೀಡುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿರುವ ಸಂಬಂಧ ಕಲಬುರಗಿ ಜಿಲ್ಲೆ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ಸಂಖ್ಯೆ: 26/2023 ಕಲಂ, 182, 419, 464, 465 ಐ.ಪಿ.ಸಿ ಪುಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ರಾಜ್ಯದ ಅಪರಾಧ ತನಿಖಾ ಸಂಸ್ಥೆಯಾದ ಸಿಐಡಿಯಲ್ಲಿನ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಒಂದು ವಿಶೇಷ ತನಿಖಾ ತಂಡ (Special Investigation Team) ವನ್ನು ರಚಿಸಿ ಆದೇಶಿಸಿದೆ.
ಮೇಲ್ಕಂಡ ಸದರಿ ವಿಶೇಷ ತನಿಖಾ ತಂಡಕ್ಕೆ ಕರ್ನಾಟಕ ರಾಜ್ಯ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರ ಕಲಂ 2(ಯು) ಅಡಿಯಲ್ಲಿ ಪೊಲೀಸ್ ಠಾಣಾಧಿಕಾರವನ್ನು ನೀಡಲಾಗಿದೆ. ಸದರಿ ಸಿಐಡಿಯ ವಿಶೇಷ ತನಿಖಾ ತಂಡಕ್ಕೆ (Special Investigation Team) ಮೇಲ್ಕಂಡ ಪುಕರಣವೂ ಸೇರಿದಂತೆ ಹಾಗೂ ಈ ಸಂಬಂಧ ಕರ್ನಾಟಕ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ & ಐಜಿಪಿ ರವರು ವರ್ಗಾಯಿಸುವುದು ಹಾಗೂ ವಿಶೇಷ ತನಿಖಾ ತಂಡಕ್ಕೆ ಅವಶ್ಯವಿರುವ ಇತರೆ ಅಧಿಕಾರಿ/ ಸಿಬ್ಬಂದಿಗಳನ್ನು ಒದಗಿಸುವುದು.
ವಿಶೇಷ ತನಿಖಾ ತಂಡವು (Special Investigation Team) ಸಿಐಡಿಯಲ್ಲಿನ ಹಾಗೂ ಸ್ಥಳೀಯ ಪೊಲೀಸ್ ಘಟಕದ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು. ಪೊಲೀಸ್ ಮಹಾನಿರ್ದೇಶಕರು, ಸಿಐಡಿ ರವರ ಮೇಲ್ವಿಚಾರಣೆಯಲ್ಲಿ ಈ ವಿಶೇಷ ತನಿಖಾ ತಂಡ (Special Investigation Team) ವು ಕಾರ್ಯನಿರ್ವಹಿಸುವುದು.
ಸದರಿ ವಿಶೇಷ ತನಿಖಾ ತಂಡವು ಎಲ್ಲಾ ಆಯಾಮಗಳಲ್ಲಿ ಈ ಸಂಬಂಧ ದಾಖಲಾಗಬಹುದಾದ ಇತರೆ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಂಡು ಶೀಘ್ರವೇ ತನಿಖೆಯನ್ನು ಪೂರ್ಣಗೊಳಿಸಿ ತನಿಖಾ ವರದಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ, 193ರ ಅಡಿಯಲ್ಲಿ ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸತಕ್ಕದ್ದು ಹಾಗೂ ತನಿಖಾ ವರದಿಯನ್ನು ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಆದೇಶ ಹೇಳಿದೆ.