Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ: ಮಳೆ ನಿಂತರೂ ನಿಲ್ಲದ ನೆರೆ ಹಾವಳಿ

ಕಲಬುರಗಿ: ಮಳೆ ನಿಂತರೂ ನಿಲ್ಲದ ನೆರೆ ಹಾವಳಿ

0

ಕಲಬುರಗಿ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಆರ್ಭಟಿಸಿದ ವರುಣ ಕಲ್ಯಾಣದ ಜಿಲ್ಲೆಗಳಲ್ಲಿ ಅನಾಹುತ ಮಾಡಿ, ಭಾನುವಾರ ಬಿಡುವು ತೆಗೆದುಕೊಂಡಿದ್ದರೂ ನೆರೆ ಹಾವಳಿ ಮುಂದುವರೆದಿದೆ.

ಕಲ್ಯಾಣ ಭಾಗದ ಕಲಬುರಗಿ, ಯಾದಗಿರಿ, ಬೀದರ ಮತ್ತು ರಾಯಚೂರು ಜಿಲ್ಲೆಗಳ ಎಲ್ಲ ನದಿಗಳು, ವ್ಯಾಪಕ ಮಳೆಯ ಕಾರಣದಿಂದ ತುಂಬಿ ಹರಿಯುತ್ತಿವೆ. ಮೇಲಾಗಿ ವಿವಿಧ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್‌ಗಳಲ್ಲಿ ನೀರು ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ, ಹೊಲಗದ್ದೆಗಳು ಮಾತ್ರವಲ್ಲದೇ ಹಲವು ಗ್ರಾಮಗಳು ಜಲಾವೃತಗೊಂಡು ಜನ ತತ್ತರಿಸುವಂತಾಗಿದೆ.

ಉಜನಿ ಮತ್ತು ಸಿನಾ ಜಲಾಶಯಗಳ ಒಳ ಹರಿವು ಹೆಚ್ಚಾಗುವ ಸಂಭವವಿದ್ದು, ನದಿಗೆ ನೀರು ಬಿಡಲಾಗುವ ಕಾರಣ, ನದಿ ಪಾತ್ರದ ಜನರು ಎಚ್ಚರಿಂದ ಇರುವುದು ಅನಿವಾರ್ಯವಾಗಿದೆ. ಕಾಳಗಿ, ಹಣಸಗಿ, ಸೇಡಂ, ವಾಡಿ ಫರಹತಾಬಾದ, ಸರಡಗಿ ಮುಂತಾದೆಡೆ ಮಣ್ಣಿನಿಂದ ನಿರ್ಮಿತ ಗೋಡೆಗಳು ಕುಸಿದಿದ್ದು, ನಿವಾಸಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರೆಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶಗಳಿಗೆ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸ್ಸಿಮ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಯಾದಗಿರಿ ಜಿಲ್ಲಾದ್ಯಂತ ಕಳೆದ 4 ದಿನಗಳಿಂದ ಏರುಮಟ್ಟದಲ್ಲಿ ಸಾಗುತ್ತಿರುವ ಭೀಮಾ ನದಿ ಭಾನುವಾರ ತನ್ನ ರುದ್ರ ನರ್ತನ ತಾಳುತ್ತಿದೆ. ನದಿ ಎಡ ಮತ್ತು ಬಲ ದಂಡೆಯ ಹತ್ತಾರು ಗ್ರಾಮಗಳ ಕೃಷಿ ಜಮೀನಿಗೆ ನೀರು ನುಗ್ಗಿದೆ. ಸೇತುವೆಗಳ ಜಲಾವೃತಗೊಂಡು ಸಂಚಾರ ಬೆಳೆಗಳು ಜಲಾಹುತಿಯಾಗಿವೆ.

ನದಿ ಪಾತ್ರದಲ್ಲಿ ನೀರು ದಿನವಿಡೀ ಏರುಮಟ್ಟದಲ್ಲಿ ಸಾಗಿದ್ದರಿಂದ ತೀರದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮಹರಾಷ್ಟ್ರದ ಉಜನಿ ಜಲಾಶಯ ದಿಂದ 3 ಲಕ್ಷಕ್ಕೂ ಅಧಿ ಕ್ಯೂಸೆಕ್ ನೀರು ಭೀಮೆಗೆ ಹರಿಬಿಡಲಾಗಿದೆ. ಹಾಗಾಗಿ ನದಿಪಾತ್ರದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಸೇತುವೆಗಳು, ರಸ್ತೆಗಳು, ಹತ್ತಿ,ಭತ್ತ ಮತ್ತು ತೊಗರಿ ಬೆಳೆ ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ.

ಬೆಳೆ ಹಾನಿಗೆ ಪರಿಹಾರ ಒದಗಿಸಲು ಕ್ರಮ: ಬೀದರ್ ಜಿಲ್ಲಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ಬೆಳೆಗಳ ಜಂಟಿ ಸಮೀಕ್ಷೆಯನ್ನು ಶೀಘ್ರವೇ ಪೂರ್ಣಗೊಳಿಸಿ, ಪರಿಹಾರವನ್ನು 15 ದಿನದೊಳಗಾಗಿ ಒದಗಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಮಂತ್ರಿ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಿಂದ, ಮಾನವ ಜೀವ ಹಾನಿ, ಪ್ರಾಣಿ ಜೀವ ಹಾನಿ, ಮನೆ ಹಾನಿ, ಬೆಳೆ ಹಾನಿ, ಮೂಲಭೂತ ಸೌಕರ್ಯಗಳಾದ ರಸ್ತೆ, ಬ್ರಿಡ್ಜ್, ಶಾಲಾ ಹಾಗೂ ಅಂಗನವಾಡಿ ಕೊಠಡಿಗಳು, ವಿದ್ಯುತ್ ಸಂಪರ್ಕ, ಕೆರೆ, ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುತ್ತವೆ.

ಈ ಬಗ್ಗೆ ಪರಿಹಾರ ಕ್ರಮಗಳ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತುರ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಅತಿವಷ್ಠಿಯಿಂದ ಆಗಬಹುದಾದ ಅನಾಹುತಗಳನ್ನು ಕಡಿಮೆಗೊಳಿಸಲು ಸೂಚಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version