Home ನಮ್ಮ ಜಿಲ್ಲೆ ಗದಗ ಗದಗ: ಗುಂಪು ಘರ್ಷಣೆ – ಲಕ್ಕುಂಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, 8 ಜನರಿಗೆ ಗಾಯ

ಗದಗ: ಗುಂಪು ಘರ್ಷಣೆ – ಲಕ್ಕುಂಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, 8 ಜನರಿಗೆ ಗಾಯ

0

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗುರುವಾರ ರಾತ್ರಿ ಗುಂಪು ಘರ್ಷಣೆ ನಡೆದಿದ್ದು ಲಕ್ಕುಂಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.

ಘರ್ಷಣೆಯಲ್ಲಿ ಎಂಟು ಜನರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾಜ ಕರೆಕಲ್ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ. ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಡಿಎಸ್ಪಿ ಮುರ್ತುಜಾ ಖಾದ್ರಿ, ಗ್ರಾಮೀಣ ಸಿಪಿಐ ಸಂಗಮೇಶ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ.

ಗಾಯಾಳುಗಳನ್ನು ಅಂಬರೀಷ್ ಶೇಖರಪ್ಪ ಕರೆಕಲ್ಲ, ಸಂಗಮೇಶ ವೀರಭದ್ರಪ್ಪ ನರಗುಂದಮಠ, ಬಸವರಾಜ ಕವಲೂರ, ಮಹ್ಮದರಫೀಕ ಅಲಿಯಾಸ್ ರಾಜೂ ಗುದಗನವರ, ನವೀನ ದೇವೇಂದ್ರಪ್ಪ ಬಿನ್ನಾಳ, ಅಭಿಷೇಕ ಕಳ್ಳಿ, ಮಂಜುನಾಥ ಕಣವಿ ಎಂದು ಗುರುತಿಸಲಾಗಿದೆ.

ಘರ್ಷಣೆಗೆ ಕಾರಣವೇನು?: ಕಳೆದ ಸೋಮವಾರ ಜರುಗಿದ ಹಾಲಗುಂಡಿ ಬಸವೇಶ್ವರ ಲಘು ರಥೋತ್ಸವದದಂದು ಕೆಲ ಯುವಕರ ಮಧ್ಯೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತೆರಳಿ ಈ ಗುಂಪು ಘರ್ಷಣೆ ನಡೆದಿದೆಯೆಂದು ಮೂಲಗಳು ತಿಳಿಸಿವೆ. ಲಘು ರಥೋತ್ಸವದಂದು ಜರುಗಿದ ಜಗಳ ರಾಜೀ ಮಾಡಿಸಲು ಕೆಲವರು ಈ ಯುವಕರನ್ನು ಗ್ರಾಮದ ದುರ್ಗಾದೇವಿ ಕೆರೆಯ ಹತ್ತಿರ ಕರೆದಿದ್ದಾರೆ. ರಾಜಿ ಸಂಧಾನದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದಾರೆ. ರಾಜಿ ಸಂಧಾನದ ನೆಪದಲ್ಲಿ ಕರೆದು ಹಲ್ಲೆ ಮಾಡಿದ್ದರಿಂದ ಕ್ರೋಧಗೊಂಡ ಇನ್ನೊಂದು ಗುಂಪಿನ ಜನರು ಅಡವಿಸೋಮಾಪುರ, ಲಕ್ಕುಂಡಿ, ಸಂಭಾಪೂರ, ಗದಗ, ಹುಬ್ಬಳ್ಳಿಯಿಂದ ಕಾರಿನಲ್ಲಿ ಜನರನ್ನು ಕರೆಯಿಸಿ ಹಲ್ಲೆ ಮಾಡಿಸಿದೆಯೆಂದು ತಿಳಿದು ಬಂದಿದೆ.

ಈ ಕುರಿತು ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾತನಾಡಿ, “ಲಕ್ಕುಂಡಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಘರ್ಷಣೆಯಾಗಿದೆ. ಪ್ರಸ್ತುತ ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಲಕ್ಕುಂಡಿಯಲ್ಲಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ” ಎಂದು ಹೇಳಿದ್ದಾರೆ

ಪ್ರಕರಣ ದಾಖಲು: ಲಕ್ಕುಂಡಿ ಗ್ರಾಮದಲ್ಲಿ ಜರುಗಿದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮುತ್ತು ಹನುಮಂತಪ್ಪ ಕಾಯಣ್ಣವರ, ರಾಜೂ ದೇವಪ್ಪ ಗೋಣೆಮ್ಮನವರ, ಮೈಲಾರಿ ಹನುಮಂತಪ್ಪ ಕಾಯಣ್ಣವರ, ದಾವಲಸಾಬ ಬಾಬಪ್ಪ ನದಾಫ, ಶಿವರಾಜ ದೇವಪ್ಪ ಗೋಣೇಮ್ಮನವರ, ಕಿರಣ ಸೋಮಪ್ಪ ಭಜಂತ್ರಿ, ಸಂತೋಷ ಮಹಾದೇವಪ್ಪ ಚಲುವಾದಿ, ನವೀನ ಚಲುವಾದಿ, ಬಸವರಾಜ ಮುದಕಪ್ಪ ಕಾಯಣ್ಣವರ, ಯಲ್ಲಪ್ಪ ಮರಿಬಸಪ್ಪ ಜವಳಬೆಂಚಿ, ಕುಮಾರ ಮಲ್ಲಪ್ಪ ಮುಳ್ಳಾಳ, ರವಿ ಪರಸಪ್ಪ ಪೂಜಾರ, ನವಾಜ ಹೋಚಲಾಪೂರ, ಅನ್ವರ ನದಾಫ ಹಾಗೂ ಇನ್ನಿತರ ಹದಿನೈದು ಇಪ್ಪತ್ತು ಅನಾಮಧೇಯರ ಮೇಲೆ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version