Home ನಮ್ಮ ಜಿಲ್ಲೆ ಗದಗ ಶಾಸಕರು, ಡಿಸಿ ಮನೆ ಮುಂದೆ ಮೆಕ್ಕೆಜೋಳ ಸುರಿಯಿರಿ: ದಿಂಗಾಲೇಶ್ವರ ಶ್ರೀ

ಶಾಸಕರು, ಡಿಸಿ ಮನೆ ಮುಂದೆ ಮೆಕ್ಕೆಜೋಳ ಸುರಿಯಿರಿ: ದಿಂಗಾಲೇಶ್ವರ ಶ್ರೀ

0

ಗದಗ (ಲಕ್ಷ್ಮೇಶ್ವರ): ಸರಕಾರ ಒಂದೊಮ್ಮೆ ರೈತರ ಬೆಂಬಲಕ್ಕೆ ನಿಲ್ಲದಿದ್ದರೆ ಮೆಕ್ಕೆಜೋಳ ಬೆಳೆದ ಎಲ್ಲ ರೈತರು ಗೋವಿನಜೋಳವನ್ನು ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಾಕಿಕೊಂಡು ಪ್ರತಿಭಟನೆ ಮಾಡಬೇಕು ಹಾಗೂ ಹೆದ್ದಾರಿಗಳಲ್ಲಿ ಸಾವಿರಾರು ರೈತರು ಹಾಕಿರುವ ಗೋವಿನಜೋಳ ಬೀದಿಗೆ ಸುರಿದು ರಸ್ತೆ ಬಂದ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಿರಹಟ್ಟಿ ಸಂಸ್ಥಾನಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಕರೆ ನೀಡಿದರು.

ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ಭಾಗದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ವಿವಿಧ ರೈತ ಪರ ಸಂಘಟನೆಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಕುಳಿತಿದ್ದು, ಬುಧವಾರ ಹೋರಾಟ ವೇದಿಕೆಗೆ ಆಗಮಿಸಿದ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಆಡಳಿತಕ್ಕೆ ಬರುವ ಯಾವುದೇ ಸರಕಾರಗಳು ರೈತರ ಪರವಾಗಿ ಇರುವದಿಲ್ಲ. ಸರಕಾರ ಕಬ್ಬು ಬೆಳೆಗಾರರಿಗೆ ನೀಡಿದ ಮನ್ನಣೆಯಂತೆ ಉತ್ತರ ಕರ್ನಾಟಕ ಭಾಗದ ರೈತರು ಬೆಳೆದ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಹಿಂಜರಿಯಲು ಕಾರಣವೇನು ಎಂದು ಪ್ರಶ್ನಿಸಿದರು.

ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಆಮರಣ ಉಪವಾಸ ಕೈಗೊಂಡಿರುವ ಆದರಹಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರು ಸಕ್ಕರೆ ಪ್ರಮಾಣ ತೀವ್ರ ಕುಸಿತ ಕಂಡಿದ್ದು, ಆರೋಗ್ಯ ಹದಗೆಡುತ್ತಿದ್ದರೂ ಸಹ ಉಪವಾಸದಿಂದ ಹಿಂದೆ ಸರಿಯುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version