ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಮತ್ತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎನ್.ಶಶಿಕುಮಾರ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಆಗಸ್ಟ್ 26ರ ರಾತ್ರಿ 11.59ರಿಂದ ಆಗಸ್ಟ್ 28ರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ಆಗಸ್ಟ್ 30ರ ರಾತ್ರಿ 11.59ಗಂಟೆಯಿಂದ ಸೆಪ್ಟೆಂಬರ್ 1ರ ಬೆಳಗ್ಗೆ 6 ಗಂಟೆಯವರೆಗೆ. ಸೆಪ್ಟೆಂಬರ್ 1ರ ರಾತ್ರಿ 11.59ಗಂಟೆಯಿಂದ ಸೆಪ್ಟೆಂಬರ್ 3ರ ಬೆಳಗ್ಗೆ 6 ಗಂಟೆಯವರಗೆ ಹಾಗೂ ಸೆಪ್ಟೆಂಬರ್ 3ರ ರಾತ್ರಿ 11.59 ಗಂಟೆಯಿಂದ ಸೆಪ್ಟೆಂಬರ್ 7ರ ಬೆಳಗ್ಗೆ 6 ಗಂಟೆಯವರಗೆ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ
ಈ ದಿನಾಂಕಗಳಂದು ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬಾರ್‌ಗಳು, ಕ್ಲಬ್ ಮತ್ತು ಹೊಟೇಲ್‍ಗಳಲ್ಲಿ ಮದ್ಯ ಮರಾಟ, ಮದ್ಯ ಸಾಗಾಟ ಮತ್ತು ಮದ್ಯ ಸೇವೆನೆಯನ್ನು ನಿಷೇಧಿಸಿ, ಮದ್ಯದ ಅಂಗಡಿಗಳನ್ನು ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚಿಸತಕ್ಕದ್ದು.
ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ವಲಯ ಅಬಕಾರಿ ಇನ್ಸೆಪೆಕ್ಟರ್ ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು ಕರ್ನಾಟಕ ಅಬಕಾರಿ ಕಾಯ್ದೆ- 1965ರ ಕಲಂ 21(2) ರ ಅನ್ವಯ ಅವಶ್ಯಕತೆ ಕಂಡುಬಂದಲ್ಲಿ, ಶಾಂತಿ ಪಾಲನೆಗಾಗಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಧಾರವಾಡ ಅಬಕಾರಿ ಉಪ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಡಿ.ಸಿ.ಪಿ (ಕಾ ಮತ್ತು ಸು) ಹಾಗೂ ಅವರ ಅಧೀನ ಅಧಿಕಾರಿಗಳು, ಧಾರವಾಡ ಹೆಚ್ಚುವರಿ ಅಬಕಾರಿ ಅಧೀಕ್ಷಕರು ಮತ್ತು ಹುಬ್ಬಳ್ಳಿ ಅಬಕಾರಿ ಉಪ ಅಧೀಕ್ಷಕರು ಇವರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ಹೇಳಿದ್ದಾರೆ.