ಧಾರವಾಡ: ಕರ್ನಾಟಕದ ವಾಣಿಜ್ಯ ನಗರಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ. ಧಾರವಾಡ-ಹುಬ್ಬಳ್ಳಿ ಅವಳಿ ನಗರಗಳು ಪ್ರತಿನಿತ್ಯ ಸುತ್ತಮುತ್ತಲ ಜಿಲ್ಲೆ, ಗ್ರಾಮಗಳಿಂದ ಎರಡೂ ನಗರಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಇಂತಹ ಜನರಿಗೆ ಈಗ ಸಿಹಿಸುದ್ದಿಯೊಂದು ಸಿಕ್ಕಿದೆ.
ಈ ಕುರಿತು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಬಳಿಕ ಸಂಸದರು ಈ ಕುರಿತು ವಿವರಣೆ ನೀಡಿದ್ದಾರೆ.
10 ಮೆಮು ರೈಲಿಗೆ ಬೇಡಿಕೆ: ಪ್ರಹ್ಲಾದ್ ಜೋಶಿ ಇಂದು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಮಾನ್ಯ ಶ್ರೀ ಅಶ್ವಿನಿ ವೈಷ್ಣವ ಅವರನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರೊಂದಿಗೆ ಭೇಟಿ ಮಾಡಲಾಯಿತು ಎಂದು ಹೇಳಿದ್ದಾರೆ.
- ಹುಬ್ಬಳ್ಳಿಯ ರೈಲ್ವೆ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣದ ಮಟ್ಟಕ್ಕೆ ಪರಿವರ್ತಿಸುವ ಕುರಿತು
- ಗದಗ ರಸ್ತೆಯ ಮೇಲಿರುವ ಎರಡು ಲೈನ್ ರೈಲ್ವೆ ಬ್ರಿಡ್ಜ್ ಅನ್ನು 4 ಲೇನ್‌ಗೆ ವಿಸ್ತರಿಸುವ ದೃಷ್ಟಿಯಿಂದ ಇನ್ನೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡುವ ಕುರಿತು
- ಸ್ಥಳೀಯ ಪಟ್ಟಣ, ಗ್ರಾಮಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರಿಗೆ 10 ಹೊಸ ಮೆಮು ರೈಲನ್ನು ಆರಂಭಿಸುವಂತೆ ವಿನಂತಿಸಿದೆನು ಎಂದು ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿ ಈ ಸಂದರ್ಭದಲ್ಲಿ ನಮ್ಮ ಹುಬ್ಬಳ್ಳಿಯನ್ನು ಆಧಾರ್ ಸೇವಾ ಕೇಂದ್ರವನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಸೇವಾ ಪೂರೈಕೆದಾರರ ತೊಡಗಿಸಿಕೊಳ್ಳಲು ಸಂಬಂಧಿಸಿದ ವಿನಂತಿ ಪ್ರಸ್ತಾಪ (RFP) ದಲ್ಲಿ ಮುಂದುವರಿಸುವಂತೆ ಕೋರಿದ್ದಾರೆ.
ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿರುವ ಹುಬ್ಬಳ್ಳಿಯು ಸುಮಾರು 10 ಲಕ್ಷ ಜನಸಂಖ್ಯೆಯನ್ನು ಹೊಂದಿರುವುದರಿಂದ ಇಲ್ಲಿನ ಕೇಂದ್ರ ಅತ್ಯಂತ ಅವಶ್ಯಕವಾಗಿದ್ದು, ದೇಶದಾದ್ಯಂತ ಪ್ರತಿ ಜಿಲ್ಲಾವಾರು ಕೇಂದ್ರದ ಜೊತೆಗೆ ಮಹತ್ತರವಾದ ನಗರಗಳಲ್ಲಿ ಈ ಕೇಂದ್ರಗಳನ್ನು ಮುಂದುವರಿಸುವಂತೆ ಕೋರಿದ್ದಾರೆ.
ಮಾನ್ಯ ಸಚಿವರು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು ಜಿಲ್ಲಾ ಕೇಂದ್ರದ ಜೊತೆಗೆ ಹುಬ್ಬಳ್ಳಿ ಮತ್ತು ಇತರೆ ಪ್ರಮುಖ ನಗರದಲ್ಲಿ ಕೇಂದ್ರಗಳನ್ನು ಮುಂದುವರಿಸುವಂತೆ ಟೆಂಡರ್ ಕರೆಯಲು ಸೂಚಿಸಿದ್ದಾರೆ.
ನಮ್ಮ ಉತ್ತರ ಕರ್ನಾಟಕದ ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಜೋಶಿ ತಿಳಿಸಿದ್ದಾರೆ.
ನೈಋತ್ಯ ವಲಯದ ಕೇಂದ್ರ: ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಪ್ರಮುಖ ನಗರವಾಗಿದೆ. ಇಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ಕಚೇರಿ ಇದೆ. ಹುಬ್ಬಳ್ಳಿಯಿಂದ ರಾಜಧಾನಿ ಬೆಂಗಳೂರು, ಮುಂಬೈ ಕರ್ನಾಟಕ ಭಾಗಕ್ಕೆ ಜನರ ಸಂಚಾರ ಹೆಚ್ಚಿದೆ. ಅತಿ ಉದ್ದದ ರೈಲು ಪ್ಲಾಟ್ ಫಾರಂ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿದೆ.
ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್, ಜನಶತಾಬ್ದಿ ಸೇರಿದಂತೆ ವಿವಿಧ ರೈಲುಗಳು ಸಂಪರ್ಕಿಸುತ್ತದೆ. ಆದರೆ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸುತ್ತಮುತ್ತಲ ಜಿಲ್ಲೆ, ಪಟ್ಟಣ, ಗ್ರಾಮಗಳಿಂದ ಬರುವ ಜನರ ನಿತ್ಯದ ಓಡಾಟಕ್ಕೆ ಸಚಿವರು 10 ಮೆಮು ರೈಲಿಗಾಗಿ ಬೇಡಿಕೆ ಇಟ್ಟಿದ್ದಾರೆ.
ಎಲೆಕ್ಟ್ರಿಕ್ ಎಂಜಿನ್‌ಗಳನ್ನು ಹೊಂದಿರುವ 8 ಬೋಗಿಯ ಮೆಮು ರೈಲು ಜಿಲ್ಲಾ ಕೇಂದ್ರದಿಂದ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ದರದ ಈ ರೈಲುಗಳು ಪ್ರತಿನಿತ್ಯ ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸಕ್ಕಾಗಿ ಸಂಚಾರ ನಡೆಸುವ ಜನರಿಗೆ ಬಹಳ ಅನುಕೂಲಕರವಾಗಿವೆ.
ಬೆಂಗಳೂರು ನಗರಿಂದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು ಮುಂತಾದ ಸುತ್ತಮುತ್ತಲಿನ ನಗರಕ್ಕೆ ಜನರ ಸಂಚಾರಕ್ಕೆ ಮೆಮು ರೈಲುಗಳಿವೆ. ಆದ್ದರಿಂದ ಇದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸಹ ಸಚಿವ ಪ್ರಹ್ಲಾದ್ ಜೋಶಿ ಮೆಮು ರೈಲಿನ ಬೇಡಿಕೆ ಇಟ್ಟಿದ್ದಾರೆ.


























