Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಆಹಾರ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಿ ; ಸಿಎಂ

ಧಾರವಾಡ: ಆಹಾರ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಿ ; ಸಿಎಂ

0

ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಕಾರ್ಯೋನ್ಮುಖವಾಗುವುದು ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ ಕೃಷಿ ಮೇಳಕ್ಕೆ ಸೋಮವಾರ ಚಾಲನೆ ನೀಡಿ ಶ್ರೇಷ್ಠ ಕೃಷಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕೇವಲ ನಮ್ಮ ರಾಜ್ಯವಷ್ಟೇ ಅಲ್ಲ, ಇಡೀ ದೇಶದಲ್ಲಿ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತಿದೆ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡುವುದು ಅವಶ್ಯಕವಾಗಿದೆ.

ಇದನ್ನು ಗಂಭೀರವಾಗಿಪರಿಗಣಿಸಿ ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಬೇಕು. ರೈತರಿಗೆ ಪರಿಹಾರೋಪಾಯ ಸೂಚಿಸಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ರೈತಾಪಿ ವರ್ಗದವರಿಗೆ ಅಗತ್ಯ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದರು.

ಹಿಂದೆ ಗ್ರಾಮಸೇವಕರು ರೈತರಿಗೆ ಸಮಸ್ಯೆಯಾದಾಗ ಪರಿಹಾರ ಸೂಚಿಸುತ್ತಿದ್ದರು. ಆದರೆ ಈಗ ಗ್ರಾಮಸೇವಕರಿಲ್ಲ, ಆದ್ದರಿಂದ ರೈತರಿಗೆ ಮಾರ್ಗದರ್ಶನ ನೀಡುವುದು ಕೃಷಿ ಕಾಲೇಜು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಜವಾಬ್ದಾರಿ. ರೈತರು ದಡ್ಡರಲ್ಲ, ಆದರೆ ಅವರಿಗೆ ಮಾರ್ಗದರ್ಶನ ಬೇಕಿದೆ ಎಂದು ನುಡಿದರು.

ಬೇಡಿಕೆಗೆ ಅನುಗುಣವಾಗಿ ನಾವು ಆಹಾರ ಧಾನ್ಯ ಉತ್ಪಾದನೆ ಮಾಡದಿದ್ದರೆ ಬೇರೆ ದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಇಂಥ ಸ್ಥಿತಿ ನಿರ್ಮಾಣವಾಗದಿರಲು ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಉತ್ಪಾದನೆ ಹೆಚ್ಚಿಸಲು ಕ್ರಮ ವಹಿಸಬೇಕು. ಸಂಶೋಧನೆ ಕೇವಲ ಲ್ಯಾಬ್‌ಗೆ ಸೀಮಿತವಾಗದೇ ಕೃಷಿ ಭೂಮಿಗೆ ತಲುಪುವಂತಾಗಬೇಕು ಎಂದು ತಿಳಿಸಿದರು.

ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದು, ರಾಗಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನೇ ಇತರ ಸಿರಿಧಾನ್ಯಗಳಿಗೆ ನೀಡಲು ನಿರ್ಧರಿಸಲಾಗಿದೆ. ರೈತರು ಸಿರಿಧಾನ್ಯ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಿಪರೀತ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 5 ಲಕ್ಷ ಎಕರೆ ಭೂಮಿಯಲ್ಲಿ ಬೆಳೆಹಾನಿಯಾಗಿದೆ. ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಸಿಇಒಗಳಿಗೆ ಸೂಚಿಸಲಾಗಿದ್ದು, ವರದಿ ಬಂದ ತಕ್ಷಣವೇ ಬೆಳೆ ಪರಿಹಾರ ನೀಡಲಾಗುವುದು. ಖಜಾನೆಯಲ್ಲಿ ಹಣದ ಕೊರತೆಯಿಲ್ಲ. ಈ ಬಗ್ಗೆ ರೈತರಿಗೆ ಆತಂಕ ಬೇಡ ಎಂದು ಕೃಷಿಕರಿಗೆ ಅಭಯ ನೀಡಿದರು.

ಹೈನುಗಾರಿಕೆಯಿಂದ ಉತ್ತಮ ಆದಾಯ: ಹಾಲು ಉತ್ಪಾದನೆಯಲ್ಲಿ ಪ್ರಸತುತ ನಮ್ಮ ರಾಜ್ಯ ಗುಜರಾತ್ ನಂತರ  ದ್ವಿತೀಯ ಸ್ಥಾನದಲ್ಲಿದೆ. ಪ್ರತಿದಿನ ಸುಮಾರು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೃಷಿಕರು ಹೈನುಗಾರಿಕೆಗೆ ಆದ್ಯತೆ ನೀಡಿದರೆ ನಮ್ಮ ರಾಜ್ಯ ಶೀಘ್ರದಲ್ಲೇ ಅಗ್ರಸ್ಥಾನಕ್ಕೇರುವುದರಲ್ಲಿ ಸಂಶಯವಿಲ್ಲ. ಹೈನುಗಾರಿಕೆಯಿಂದ ರೈತರು ಉತ್ತಮ ಆದಾಯ ಗಳಿಸಬಹುದಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version