ದಾವಣಗೆರೆ: ಮುಖ್ಯಮಂತ್ರಿ ವಿಚಾರವಾಗಿ ಪಕ್ಷದಲ್ಲಿ ಗೊಂದಲವಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಸಿಎಂ ವಿಚಾರವೇ ಇಲ್ಲದಿರುವಾಗ ಅಂತೆ ಕಂತೆಗಳ ಮಾತೇಕೆ? ನಮಗಿಲ್ಲದ ಅನುಮಾನ ನಿಮಗೇಕೆ? ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಈಗಿಲ್ಲ. ಈಗಾಗಲೆ ಸಿಎಂ-ಡಿಸಿಎA ಬ್ರೇಕ್‌ಫಾಸ್ಟ್ ಸಭೆ ನಡೆಸಿದ್ದಾರೆ. ಪಕ್ಷದಲ್ಲಿ ಗೊಂದಲವಿಲ್ಲ. ಹೈಕಮಾಂಡ್ ಹೇಳಿದಂತೆ ಸರ್ಕಾರ ನಡೆಸುತ್ತೇವೆ. ಸಿಎಂ ಆಗಿ ಸಿದ್ಧರಾಮಯ್ಯ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಿಎಂ, ಡಿಸಿಎಂ ಪರ ಸ್ವಾಮೀಜಿಗಳು ಬ್ಯಾಟ್ ಬೀಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಹದೇವಪ್ಪ ‘ಆಟ ಆಡುವವರೇ ಹನ್ನೊಂದು ಜನ. ಯಾರ್ಯಾರೋ ಬ್ಯಾಟ್ ಬೀಸಿದರೆ ಹೇಗೆ? ಯಾರೂ ಬೌಲಿಂಗ್ ಮಾಡುವುದಿಲ್ಲ. ಅವರಿಗೆ ಹೊಡೆಯಲು ಚೆಂಡು ಸಹ ಸಿಗುವುದಿಲ್ಲ.
ರಾಜ್ಯದ ಜನರಿಂದ ಆಯ್ಕೆಯಾದ ಶಾಸಕರು ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿರುವಾಗ ಮುಖ್ಯಮಂತ್ರಿ ಬದಲಿ ವಿಚಾರವಿಲ್ಲ ಎಂದು ಪುನರುಚ್ಛಿಸಿದರು.
ಸಂಪುಟ ಪುನರಚನೆಯಾದಲ್ಲಿ ದಲಿತರಲ್ಲಿ ಅದರಲ್ಲೂ ಎಡ ಸಮುದಾಯಗಳಿಗೆ ಸಚಿವ ಸ್ಥಾನ ಕಲ್ಪಿಸಬೇಕೆಂಬ ಬೇಡಿಕೆ ಇದೆ ಎಂಬ ಪ್ರಶ್ನೆಗೆ ‘ದಲಿತರಿಗೆ ಶಕ್ತಿ ಬರುವುದನ್ನೇ ಸಂವಿಧಾನ ಮತ್ತು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದಾರೆ’ ಎಂದು ಸಮರ್ಥಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್‌ಗಳ ಕೊರತೆ ಇಲ್ಲ. ಊಟದ ವೆಚ್ಚ ಹೆಚ್ಚಿಸಿದ್ದೇವೆ. ಗುಣಮಟ್ಟದ ಶಿಕ್ಷಣ ಸಿಗುವ ಕಾರಣಕ್ಕೆ ಬೇಡಿಕೆ ಹೆಚ್ಚಿದೆ. 50ರಿಂದ 100 ಹೆಚ್ಚು ಸೀಟು ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೇ ಶೇ.50ರಷ್ಟು ಸ್ಥಳಾವಕಾಶ ಮಾಡಿಕೊಡಲಾಗುವುದು.
ಅಲೆಮಾರಿಗಳು, ವಿಮುಕ್ತ ದೇವದಾಸಿಯರ ಮಕ್ಕಳು, ಚಿಂದಿ ಆಯುವ ಮಕ್ಕಳಿಗೆ ಪರೀಕ್ಷೆ ರಹಿತವಾಗಿಯೇ ಸೀಟು ನೀಡಲು ಆದ್ಯತೆ ನೀಡಲಾಗುತ್ತದೆ ಎಂದರು.
ಒAದೆರಡು ಕಡೆ ಹಾಸ್ಟೆಲ್‌ಗಳಲ್ಲಿ ಕಳಪೆ ಊಟದ ದೂರುಗಳಿವೆ. ಹಾಸ್ಟೆಲ್‌ಗಳಲ್ಲಿ ಆಹಾರದ ಮೆನು ಪಟ್ಟಿ ಹಾಕಿದ್ದು ಪಾರದರ್ಶಕ ವಿತರಣೆ ನಡೆಯುತ್ತಿದೆ. ನಾವು ಬಂದ ನಂತರ ಇಲಾಖೆಯಲ್ಲಿ ಸುಧಾರಣೆಯಾಗಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಕಾನೂನು ಉಲ್ಲಂಘನೆ ಮಾಡಿಲ್ಲ ಎಂದರು.
ಇಲಾಖೆಯಲ್ಲಿ ಉಳಿಕೆಯಾದ 14.11 ಕೋಟಿ ಮೊತ್ತದ ಎಸ್‌ಇಪಿ ಟಿಎಸ್‌ಪಿ ಹಣ ಸರ್ಕಾರಕ್ಕೆ ವಾಪಸ್ ಹೋಗುವುದಿಲ್ಲ. ಇದು ಮುಂದಿನ ವರ್ಷಕ್ಕೆ ಮುಂದುವರಿಯಲಿದೆ. ಬರುವ ವರ್ಷದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

























