ದಾವಣಗೆರೆ: ಜೆಡಿಎಸ್ ಮುಖಂಡ ಟಿ.ಅಸ್ಗರ್ ಕೊಲೆಯತ್ನ ಆರೋಪಿಗೆ ನೆರವು ನೀಡಿದ ಆರೋಪದ ಹಿನ್ನೆಲೆ ಮಾಯಕೊಂಡ ಕಾಂಗ್ರೆಸ್ ಮುಖಂಡೆ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜೆಡಿಎಸ್ ಮುಖಂಡ ಟಿ.ಅಸ್ಗರ್ ಕೊಲೆಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಅಜಾದ್ ನಗರ ಠಾಣೆಯ ಪೊಲೀಸರು ಸವಿತಾಬಾಯಿ ಅವರನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಅಸ್ಗರ್ ಕೊಲೆ ಯತ್ನದ ಆರೋಪಿಗೆ ನೆರವಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ದಾವಣಗೆರೆಯ ಬಾಷಾನಗರದಲ್ಲಿ ನ.10ರಂದು ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದ ಟಿ. ಅಸ್ಗರ್ ಮೇಲೆ ಕಾಂಗ್ರೆಸ್ ಮುಖಂಡ ಖಾಲೀದ್ ಪೈಲ್ವಾನ್ ಚಾಕುವಿನಿಂದ ಮಾರಣಾಂತಿಕ ದಾಳಿ ಮಾಡಿ ಪರಾರಿಯಾಗಿದ್ದನು. ತಲೆಮರೆಸಿ ಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಜಾಲಬೀಸಿದಾಗ ಅಸ್ಗರ್ ಕೊಲೆಗೆ ಯತ್ನಿಸಿದ ಖಾಲೀದ್ ಪೈಲ್ವಾನ್‌ನಿಗೆ ಸವಿತಾಬಾಯಿ ಹಣಕಾಸಿನ ಸಹಾಯ ಹಾಗೂ ಆಶ್ರಯ ನೀಡಿ ಸಹಾಯ ಮಾಡಿದ್ದು ಬಯಲಿಗೆ ಬಂದಿದೆ.
ಸವಿತಾಬಾಯಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಯಕೊಂಡ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದೇ ಇದ್ದಾಗ ಪಕ್ಷೇತರವಾಗಿ ಸ್ಪರ್ಧೆ ಮಾಡಿ, ಪರಾಭವಗೊಂಡಿದ್ದರು. ಚುನಾವಣೆ ಬಳಿಕ ಮರಳಿ ಕಾಂಗ್ರೆಸ್ ಸೇರಿದ್ದರು.
