ದಾವಣಗೆರೆ: ರಾಜ್ಯ ಸರಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದವರಿಗೆ ಮಾತ್ರ ನೀಡುವ ಬಗ್ಗೆ ಸರಕಾರ ಪರಿಶೀಲನೆ ನಡೆಸಿ, ತೀರ್ಮಾನ ಕೈಗೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕ್ಷೀಣಿಸಿದೆ.
ಸರಕಾರದ ಯೋಜನೆಗಳು, ಸೌಲಭ್ಯಗಳು ಬೇಕೆನ್ನುವ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳೇ ಇರುತ್ತಾರೆ. ಹೀಗಿದ್ದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿರುತ್ತಾರೆ. ಆದ್ದರಿಂದ ಸರಕಾರದ ಸೌಲಭ್ಯ ಬೇಕೆನ್ನುವವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರ್ಪಡೆ ಮಾಡುವ ಕುರಿತು ಸರಕಾರ ಪರಾಮರ್ಶಿಸಿ, ತೀರ್ಮಾನ ಮಾಡಬೇಕೆಂದು ಅವರು ಅಭಿಪ್ರಾಯಿಸಿದರು.
ಈ ರೀತಿ ಆದಾಗ ಸರಕಾರಿ ಶಾಲೆಗಳು ಅಭ್ಯುದಯ ಕಾಣುವುದರ ಜತೆಗೆ ಶಾಲೆಗಳು ಉಳಿಯುತ್ತವೆ. ಈ ಉದ್ದೇಶದಿಂದ ಸರಕಾರ ಇಂಥ ನಿಯಮ ಜಾರಿ ಮಾಡಬೇಕೆಂಬುದು ನನ್ನ ಮನವಿ ಎಂದರು. ಸರಕಾರಿ ಶಾಲೆಗಳಿಗೂ ಸರ್ಕಾರ ಅನುದಾನ ನೀಡುತ್ತಿದೆ. ಅನುದಾನಕ್ಕೆ ಕೊರತೆಯಿಲ್ಲ. ಪ್ರಮುಖವಾಗಿ ಬೇಕಿರುವುದು ಮಕ್ಕಳ ಹಾಜರಾತಿ. ಆದ್ದರಿಂದ ಸರಕಾರಿ ಶಾಲೆಗಳತ್ತ ಮಕ್ಕಳು ಮುಖ ಮಾಡಬೇಕು ಎಂದರು.
ದೇಶಾದ್ಯಂತ ಜಾತಿಗಣತಿ ನಡೆಯುತ್ತಿದ್ದು, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜದವರು ಇದರಲ್ಲಿ ಪಾಲ್ಗೊಂಡು ನ್ಯಾಯ ಪಡೆದುಕೊಳ್ಳಿ. ದ್ರಾವಿಡ ಸಮುದಾಯದವರು ತಮ್ಮ ಮೀಸಲಾತಿ ಪಡೆದುಕೊಳ್ಳಲು ಹೋರಾಟ ನಡೆಸಬೇಕಾಯಿತು. ಹಾಗಾಗದೆ, ಜಾತಿಗಣತಿಯಲ್ಲಿ ಪಾಲ್ಗೊಂಡು ನಿಮ್ಮ ಸಮಾಜದ ಕುರಿತು ದಾಖಲಾತಿ ನೀಡಿ ಎಂದು ತಿಳಿಸಿದರು.