Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಧರ್ಮಸ್ಥಳ ಚಲೋ: ಧರ್ಮಸ್ಥಳದ ಮೇಲಿನ ದಾಳಿಗೆ ಧರ್ಮವೇ ಉತ್ತರಿಸುತ್ತಿದೆ

ಧರ್ಮಸ್ಥಳ ಚಲೋ: ಧರ್ಮಸ್ಥಳದ ಮೇಲಿನ ದಾಳಿಗೆ ಧರ್ಮವೇ ಉತ್ತರಿಸುತ್ತಿದೆ

0

ಧರ್ಮಸ್ಥಳ: “ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ಹಚ್ಚಲು ಪಣತೊಟ್ಟ ಕಾಣದ ಕೈಗಳು ಇಂದು ಹೆದರಿವೆ. ಧರ್ಮಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಬೇಕೆಂಬ ಪಿತೂರಿ ಮುರಿದು ಹೋಗುತ್ತಿದೆ. ಧರ್ಮಸ್ಥಳದ ಮೇಲೆ ನಡೆದ ದಾಳಿಗೆ ಧರ್ಮವೇ ಉತ್ತರವನ್ನು ನೀಡುತ್ತಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಧರ್ಮಸ್ಥಳ ಚಲೋ ಹಾಗೂ ಧರ್ಮಸ್ಥಳದಲ್ಲಿ ಧರ್ಮಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.

“ಧರ್ಮಸ್ಥಳ ಐತಿಹಾಸಿಕ ಸ್ಥಳ, ಪವಿತ್ರ ಭೂಮಿ. ಧರ್ಮಸ್ಥಳ – ನಮ್ಮ ಧರ್ಮ, ನಂಬಿಕೆ ಮತ್ತು ಇತಿಹಾಸ ಹಾಗೂ ಧಾರ್ಮಿಕತೆಯ ಭವಿಷ್ಯದ ಸಂಬಂಧ ಹೊಂದಿದೆ. ಧರ್ಮಸ್ಥಳ ಧರ್ಮದ ಸ್ಥಾನ” ಎಂದು ಹೇಳಿದರು.

“ಅಂದು ಇತಿಹಾಸದಲ್ಲಿ ಭಾರತದ ಹಿಂದೂ ದೇವಾಲಯಗಳ ಮೇಲೆ ಆಕ್ರಮಣಗಳು ನಡೆದವು. ಇಂದು ಸಹ ನಮ್ಮ ದೇವಾಲಯಗಳ ಮೇಲೆ ಎಡಪಂಥೀಯ ಸರ್ಕಾರಗಳು, ಕಾಣದ ಕೈಗಳ ಆಕ್ರಮಣ ಮುಂದುವರೆಯುತ್ತಲೇ ಇದೆ. ದೇವಾಲಯಗಳು ನಮ್ಮ ಧರ್ಮದ ಪ್ರಾಣವಾಯು” ಎಂದರು.

“ದೇವಾಲಯಗಳು ಯಾರ ಆಸ್ತಿ ಅಲ್ಲ, ಇದು ಭಕ್ತರ ಆಧ್ಯಾತ್ಮಿಕ ಕೇಂದ್ರ. ಧರ್ಮಸ್ಥಳದ ಪರದ ಹೋರಾಟ ರಾಜಕೀಯವಲ್ಲ, ಇದು ಧರ್ಮ – ಸಂಸ್ಕೃತಿಯ ರಕ್ಷಣೆಗಾಗಿ ನಡೆಯುತ್ತಿರುವ ಪ್ರಾಮಾಣಿಕ ಹೋರಾಟ” ಎಂದು ಜೋಶಿ ಅವರು ಹೇಳಿದರು.

“ದೇಶದ ಹಿತಕ್ಕಾಗಿ ಹಿಂದೂ ಸಮಾಜದ ಸಂಘಟನೆಯೊಂದಿಗೆ ಎಲ್ಲರೂ ಸದಾ ಜಾಗೃತರಾಗಿರಬೇಕು” ಎಂದು ಅವರು ಕಿವಿಮಾತು ಹೇಳಿದರು. “ದೇಶ ವಿಭಜನೆಯ ಕಾಲದಿಂದಲೂ ಕಾಂಗ್ರೆಸ್ ವೋಟಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿದೆ. ಸಮಾಜವನ್ನು ಒಡೆಯುವ ಹುನ್ನಾರ ಮಾಡುತ್ತಿದೆ” ಎಂದು ಅವರು ಆರೋಪಿಸಿದರು.

ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ದೂರುದಾರನ ಪ್ರಾಥಮಿಕ ವಿಚಾರಣೆ ಹಾಗೂ ತನಿಖೆಯನ್ನೂ ಮಾಡದೆ, ಎಸ್.ಐ.ಟಿ. ರಚಿಸಿರುವುದನ್ನು ಅವರು ಖಂಡಿಸಿದರು.

ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆ ನಡೆಸಿ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಬಿಜೆಪಿ ಬೆಂಬಲ ನೀಡುತ್ತದೆ ಎಂದು ಅವರು ಭರವಸೆ ನೀಡಿದರು. ಚಾಮುಂಡಿ ಬೆಟ್ಟದ ಬಗ್ಗೆಯೂ ರಾಜಕೀಯ ಮಾಡಿರುವುದನ್ನು ಖಂಡಿಸಿದ ಅವರು ಕಾಂಗ್ರೆಸ್ ಸರ್ಕಾರ ಕಿತ್ತೆಸೆಯುವ ತನಕ ಹಿಂದೂಗಳು ಸಮ್ಮನೆ ಕೂರಲಾರರು ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರವನ್ನು ಖಂಡಿಸಿದ ಅವರು, ಕೋಟ್ಯಾಂತರ ಭಕ್ತರಿಗೆ ತೀವ್ರ ನೋವಾಗಿದೆ. ಹಿಂದೂಗಳ ತಾಳ್ಮೆಯ ಪರೀಕ್ಷೆ ಮಾಡಬೇಡಿ. ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಹಗುರವಾಗಿ ಪರಿಗಣಿಸಬೇಡಿ. ಪ್ರಕರಣವನ್ನು ಸಿಬಿಐ ಅಥವಾ ಎನ್.ಐ.ಎ. ಮೂಲಕ ಇತ್ಯರ್ಥಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ “ಬುರುಡೆ ಸಿದ್ದರಾಮಯ್ಯನಿಗೆ ಧಿಕ್ಕಾರ” ಎಂದು ಭಾಷಣ ಪ್ರಾರಂಭಿಸಿ, ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್ ಹಾಗೂ ನಗರ ನಕ್ಸಲರ ಕೈವಾಡವಿದೆ. ಎಸ್.ಐ.ಟಿ. ಕೇವಲ ಕೆರೆಯ ಮೀನುಗಳನ್ನು ಹಿಡಿದಿದೆ. ಸಮುದ್ರ ತಿಮಿಂಗಿಲಗಳನ್ನು ಹಿಡಿಯಬೇಕು. ಎಸ್.ಐ.ಎ.ಗೆ ಪ್ರಕರಣ ಹಸ್ತಾಂತರಿಸಿದರೆ ಮಾತ್ರ ನ್ಯಾಯ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತ್ಯಾತೀತ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಧರ್ಮಸ್ಥಳದ ಭಕ್ತರ ಕ್ಷಮೆ ಕೇಳಬೇಕು. ನಾಡಿನ ಜನತೆಯ ಶಾಪದಿಂದ ರಾಜ್ಯ ಸರ್ಕಾರ ಸದ್ಯದಲ್ಲೆ ಪತನವಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ಸಿ.ಟಿ. ರವಿ ಮಾತನಾಡಿ, ದೂರುದಾರನ ಹಿನ್ನೆಲೆ ತಿಳಿಯದೆ, ಮಂಪರು ಪರೀಕ್ಷೆ ಮಾಡದೆ ಎಡಪಂಥೀಯರ ಮಾತುಕೇಳಿ ಎಸ್.ಐ.ಟಿಗೆ ಪ್ರಕರಣ ಒಪ್ಪಿಸಿರುವುದು ಸರಿಯಲ್ಲ ಎಂದು ಹೇಳಿದರು.

ಸುಧಾಕರ ರೆಡ್ಡಿ, ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಶ್ರೀರಾಮುಲು ಕೂಡಾ ಎಸ್.ಐ.ಟಿ. ತನಿಖೆ ಹಾಗೂ ಅನಾಮಿಕನ ವರ್ತನೆಯನ್ನು ಖಂಡಿಸಿದರು. ಸುನಿಲ್ ಕುಮಾರ್ ಕಾರ್ಕಳ, ದೊಡ್ಡಣ್ಣ ಗೌಡ ಪಾಟೀಲ್, ಮುನಿರತ್ನ, ಭಾರತಿ ಶೆಟ್ಟಿ, ರೇಣುಕಾಚಾರ್ಯ, ಭಾಗೀರಥಿ ಮುರುಳ್ಯ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ತೇಜಸ್ವಿಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಮೊದಲಾದವರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version