ಮಂಗಳೂರು: ರಾಜ್ಯದ ಸರಕಾರಿ ಶಾಲೆಗಳಿಗೆ 13,000 ಶಿಕ್ಷಕರು ಹಾಗೂ ಅನುದಾನಿತ ಶಾಲೆಗಳಿಗೆ ಸುಮಾರು 5,500 ಶಿಕ್ಷಕರು ಸೇರಿದಂತೆ 18,500ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳ ಸಿದ್ಧತೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ಕೇವಲ 4,700 ಶಿಕ್ಷಕರ ನೇಮಕ ಮಾಡಲಾಗಿತ್ತು. ತಾನು ಶಿಕ್ಷಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈಗಾಗಲೇ 13,000 ಸಾವಿರ ಶಿಕ್ಷಕರ ನೇಮಕಾತಿ ನಡೆದಿದ್ದು, ಮತ್ತೆ 18,500 ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆದಿದೆ. ಜಸ್ಟಿಸ್ ನಾಗಮೋಹನ್ದಾಸ್ ಅವರ ವರದಿಯ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು ಎಂದವರು ಹೇಳಿದರು.
ಎಲ್ ಕೆಜಿಯಿಂದ 12ನೇ ತರಗತಿವರೆಗೆ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್)ಮಾದರಿಯಡಿ ಶೇ. 80ರಷ್ಟು ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಶಾಲೆಗಳಲ್ಲಿ ಫಲಿತಾಂಶದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಇದೇ ವೇಳೆ 3 ಸ್ತರದ ಪರೀಕ್ಷಾ ಪದ್ಧತಿಯೂ ಕೂಡಾ ಮಕ್ಕಳ ಫಲಿತಾಂಶವನ್ನು ಉತ್ತಮ ಪಡಿಸಲು ಸಹಕಾರಿಯಾಗಿದೆ.
ಈ ಪರೀಕ್ಷಾ ವ್ಯವಸ್ಥೆಯಿಂದ 2ನೇ ಸ್ತರ ಹಾಗೂ 3ನೇ ಸ್ತರದ ಎಸೆಸೆಲ್ಸಿ ಪರೀಕ್ಷೆಯಲ್ಲಿ 11,6000 ಮಕ್ಕಳು ಉತ್ತೀಣರಾಗಿದ್ದು, ಪಿಯುಸಿಯಲ್ಲೂ 56,000ಕ್ಕೂ ಅಧಿಕ ಮಕ್ಕಳು ಉತ್ತೀಣರಾಗಿದ್ದಾರೆ. ಈ ಪರೀಕ್ಷಾ ವ್ಯವಸ್ಥೆಯನ್ನು ಉಚಿತವಾಗಿ ಮಾಡುವ ಮೂಲಕ ನಾನಾ ಕಾರಣಗಳಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅವಕಾಶ ಕಲ್ಪಿಸಿ ಮುಂದಿನ ಭವಿಷ್ಯ ರೂಪಿಸಲು ಅನುವು ಮಾಡಿಕೊಡಲಾಗಿದೆ. ಈ ಮಾದರಿಯನ್ನು ಕೇಂದ್ರ ಸರಕಾರವೂ ಕಾಪಿ ಮಾಡಿಕೊಳ್ಳಲು ಹೊರಟಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳ ಬಗ್ಗೆ ವಿಪಕ್ಷವಾದ ಬಿಜೆಪಿ ವಿರೋಧಿಸಿದ್ದು, ದುಡ್ಡೇ ಸಿಗದು ಎಂದು ಅಪಪ್ರಚಾರ ಮಾಡಿತ್ತು. ಆದರೆ ಐದು ಗ್ಯಾರಂಟಿಗಳೂ ಇದೀಗ ಯಶಸ್ವಿಯಾಗಿ ಜಾರಿಯಾಗಿವೆ. ಇದೀಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ನಡೆಸುವ ಜಾತಿ ಗಣತಿಯನ್ನೂ ವಿರೋಧಿಸುತ್ತಿರೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರವು ಅವೈಜ್ಞಾನಿಕವಾಗಿ ಜಿಎಸ್‌ಟಿ ಜಾರಿಗೊಳಿಸಿ ಇದೀಗ ಕಡಿಮೆ ಮಾಡಿ ಸಂಭ್ರಮ ಪಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯಯುತವಾಗಿ ಸರಕಾರದಿಂದ ಸಿಗಬೇಕಾದ ಸೌಲಭ್ಯದ ಹಂಚಿಕೆಗಾಗಿ ನಡೆಯುತ್ತಿರುವ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಅಕ್ಟೋಬರ್ 8ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಆವರೆಗೆ ಎಷ್ಟು ಪ್ರಮಾಣದ ಸಮೀಕ್ಷೆ ಆಗಿದೆ ಎಂಬ ನೆಲೆಯಲ್ಲಿ ಆಯೋಗದ ನಿರ್ದೇಶನದ ಮೇರೆಗೆ, ಮುಂದೆ ಸಮೀಕ್ಷೆಗೆ ಶಿಕ್ಷಕರನ್ನು ಮಕ್ಕಳ ಪಾಠ- ಚಟುವಟಿಕೆಗಳಿಗೆ ತೊಂದರೆ ಆಗದಂತೆ ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಇಲಾಖೆ ನಿರ್ಧರಿಸಲಿದೆ. ಶೇ.೯೫ರಷ್ಟು ಶಿಕ್ಷಕರು ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದು ಸಹಕರಿಸಿದ್ದಾರೆ ಎಂದವರು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡರಾದ ಪದ್ಮರಾಜ್, ಶುಭೋದಯ ಆಳ್ವ, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್, ನೀರಜ್ ಪಾಲ್ ಮೊದಲಾದವರಿದ್ದರು.