Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕೆಂಪು ಕಲ್ಲು: ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಕೆಂಪು ಕಲ್ಲು: ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ, ಇಂದು (ಅ.13) ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಕಾರ್ಯಕ್ರಮ ನಡೆಯಿತು. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆದ ಈ ಪ್ರತಿಭಟನೆಗೆ ನೂರಾರು ಕಾರ್ಮಿಕರು ಭಾಗವಹಿಸಿದರು.

ಫೆಡರೇಶನ್ ರಾಜ್ಯ ಸಮಿತಿಯ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, “ಲಕ್ಷಾಂತರ ಜನತೆಗೆ ಸಂಬಂಧಿಸಿದ ಈ ಪ್ರಮುಖ ಸಮಸ್ಯೆಯನ್ನು ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ರಾಜಕೀಯ ನಾಟಕವನ್ನಾಗಿ ಮಾಡಿವೆ. ಮೂರುವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಜನಸಾಮಾನ್ಯರ ತಾಳ್ಮೆಗೂ ಮಿತಿ ಇದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮುಂದುವರೆದು, “ಕೆಂಪು ಕಲ್ಲು ಮತ್ತು ಮರಳಿನ ಬೆಲೆಗಳು ಆಕಾಶಕ್ಕೇರಿದ್ದು ಜನರು ಮನೆ ಕಟ್ಟಲು ಅಸಾಧ್ಯವಾಗಿದೆ. ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುವ ತನಕ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ತಿಂಗಳಿಗೆ ರೂ.10,000 ಪರಿಹಾರ ಮೊತ್ತ ನೀಡಬೇಕು,” ಎಂದು ಒತ್ತಾಯಿಸಿದರು.

ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಚಂದ್ರಹಾಸ ಪಿಲಾರ್ ಅವರು ಮಾತನಾಡಿ, “ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅನಗತ್ಯ ಕಚೇರಿಯ ತೊಂದರೆ ನೀಡುವ ಬದಲು ನೋಂದಾಯಿತ ಕಾರ್ಮಿಕರಿಗೆ ಸವಲತ್ತು ಸರಳವಾಗಿ ನೀಡಬೇಕು. ಜಿಲ್ಲಾಡಳಿತದ ಕಾನೂನು ಕ್ರಮಗಳು ಅಭಿನಂದನಾರ್ಹವಾದರೂ, ಕಲ್ಲು–ಮರಳು ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾದರೆ ಜನರಿಗೆ ಉಪಯೋಗವೇನು?” ಎಂದು ಪ್ರಶ್ನಿಸಿದರು.

ಬಿಹಾರದ ಅಲ್ತಾಪ್ ಸೇರಿದಂತೆ ವಲಸೆ ಕಾರ್ಮಿಕರು ಮಾತನಾಡಿ, “ಕೆಲಸದ ಹಂಗಿಲ್ಲದೇ ನಾವು ಬಿಕಾರಿಗಳಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲಿ,” ಎಂದು ಮನವಿ ಮಾಡಿದರು.

ಸಮಾರೋಪ ಭಾಷಣ ಮಾಡಿದ ಫೆಡರೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರ್ಯ ಅವರು, “ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದವರು ನೈಜ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು. ಸಿಐಟಿಯು ಕಳೆದ ಮೂರುವರೆ ತಿಂಗಳಲ್ಲಿ ಇದು ನಾಲ್ಕನೇ ಹಂತದ ಹೋರಾಟ. ಈಗಲಾದರೂ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ, ಪಿಕೆಟಿಂಗ್ ಸೇರಿದಂತೆ ತೀವ್ರ ಹೋರಾಟಕ್ಕೆ ನಾವು ಸಿದ್ಧ,” ಎಂದು ಎಚ್ಚರಿಕೆ ನೀಡಿದರು.

ಅವರು ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗದಂತೆ ಕಲ್ಯಾಣ ಮಂಡಳಿಯಿಂದ ತಲಾ ₹10,000 ಮಾಸಿಕ ಪರಿಹಾರ ನೀಡಬೇಕು ಎಂದು ಪುನರುಚ್ಚರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಫೆಡರೇಶನ್ ಜಿಲ್ಲಾ ಪದಾಧಿಕಾರಿ ರವಿಚಂದ್ರ ಕೊಂಚಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ವಸಂತಿ ಧನ್ಯವಾದ ಸಲ್ಲಿಸಿದರು.

ಪ್ರತಿಭಟನಾ ನೇತೃತ್ವವನ್ನು ಜನಾರ್ಧನ ಕುತ್ತಾರ್, ರಾಮಚಂದ್ರ ಪಜೀರ್, ರೋಹಿತಾಶ್ವ, ಬಶೀರ್ ಪಜೀರ್, ಬಿಜು ಅಗಸ್ಟೀನ್, ವಿಶ್ವನಾಥ ನೆಲ್ಲಿ ಬಂಗಾರಡ್ಕ, ಆನಂದ ಗೌಡ, ಕೃಷ್ಣಪ್ಪ ಪೂಜಾರಿ ಸೇರಿದಂತೆ ಅನೇಕರು ವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version