ಧರ್ಮಸ್ಥಳ ಕೇಸ್: ಯೂಟ್ಯೂಬರ್ಸ್‌ ವಿರುದ್ಧ ಇಡಿ ತನಿಖೆ?

0
69

ಮಂಗಳೂರು: ಧರ್ಮಸ್ಥಳ ಕುರಿತು ರಾಜ್ಯ, ದೇಶ, ವಿದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ಕರ್ನಾಟಕ ಸರ್ಕಾರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ.

ಎಸ್‌ಐಟಿ ರಚನೆ, ತನಿಖೆ ಕುರಿತು ಕರ್ನಾಟಕದ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ವಿವರವಾದ ಉತ್ತರ ನೀಡಿದ್ದಾರೆ. ಸರ್ಕಾರ 19/7/2025ರಂದು ಡಾ.ಪ್ರಣವ ಮೊಹಾಂತಿ ಐಪಿಎಸ್, ಪೊಲೀಸ್ ಮಹಾನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ ಬೆಂಗಳೂರು ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ.

ಧರ್ಮಸ್ಥಳ ಪ್ರಕರಣದ ಕುರಿತು ಈ ಮಟ್ಟಿಗೆ ಚರ್ಚೆ ನಡೆಯಲು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳು ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವು ಯೂಟ್ಯೂಬರ್ಸ್‌ ಮತ್ತು ಇತರ ವ್ಯಕ್ತಿಗಳಿಗೆ ವಿದೇಶದಿಂದ ಹಣ ಬಂದಿದೆಯೇ?.

ಇಡಿ ತನಿಖೆಗೆ ಕೇಂದ್ರಕ್ಕೆ ಪತ್ರ: ಯೂಟ್ಯೂಬರ್ಸ್‌ ಮತ್ತು ಇತರರಿಗೆ ವಿದೇಶಿ ಹಣ ಬಂದಿರುವ ಕುರಿತು ಇಡಿ ತನಿಖೆ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದು, ಕೋಟ್ಯಾಂತರ ಹಿಂದೂಗಳ ಆರಾಧ್ಯ ತಾಣ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಗೆ ಯೂಟ್ಯೂಬರ್ಸ್ ಸಹಿತ ಅನೇಕರಿಗೆ ವಿದೇಶಿ ಹಣ ಬಂದಿರುವ ಆರೋಪಗಳಿವೆ. ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿದ್ದವು.

ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಕೂಡಲೇ ಇಡಿ ತನಿಖೆಗೆ ಆದೇಶಿಸುವಂತೆ ಕೇಂದ್ರದ ಗೌರವಾನ್ವಿತ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.

ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರವಿದೆ ಎಂಬುದನ್ನು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಇದರ ಹಿಂದೆ ಎಡಪಂಥೀಯರ ಒತ್ತಡ ಇದೆ ಎಂಬುದನ್ನು ಸಚಿವ ದಿನೇಶ್ ಗುಂಡೂರಾವ್‌ ಅವರೂ ಹೇಳಿರುವುದು ಗಮನಾರ್ಹ. ಹೀಗಾಗಿ ಅಸಂಖ್ಯ ಭಕ್ತರ ಆಗ್ರಹವನ್ನು ನಾನು ಮಾನ್ಯ ಗೃಹ ಸಚಿವರಿಗೆ ಮನವಿಯ ಮೂಲಕ ತಿಳಿಸಿದ್ದೇನೆ. ಇಡಿ ತನಿಖೆ ನಡೆಸಿ ಸತ್ಯ ಹೊರಗೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ.

ಪತ್ರದ ವಿವರಗಳು: ಕೋಟ ಶ್ರೀನಿವಾಸ ಪೂಜಾರಿ ಬರೆದಿರುವ ಪತ್ರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ವಿರುದ್ಧ ಷಡ್ಯಂತ್ರ. ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವ ಯೂಟ್ಯೂಬರ್ಸ್, ಕೆಲವು ವ್ಯಕ್ತಿಗಳಿಗೆ ವಿದೇಶಿ ಹಣ ಬಂದಿರುವ ಕುರಿತು ಇಡಿ ತನಿಖೆಗೆ ಮನವಿ ಎಂಬ ವಿಷಯ ಒಳಗೊಂಡಿದೆ.

ಸಂಸದರು ಪತ್ರದಲ್ಲಿ ಎಲ್ಲಾ ಕಡೆ ವರದಿಯಾಗುತ್ತಿರುವಂತೆ ಕೆಲವು ಗುಂಪು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ವಿರೋಧಿಸುತ್ತಿದೆ. ಅದಕ್ಕೆ ಧಕ್ಕೆ ತರಲು ಪ್ರಯತ್ನ ನಡೆಸಿದೆ.

ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಡಪಂಥೀಯ ಗುಂಪುಗಳ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅನಾಮಿಕ ನೀಡಿದ ದೂರಿನ ಆಧಾರದ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ರಚನೆ ಮಾಡಿದ್ದಾರೆ. ಬೇರೆ ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ವರದಿಗಳಿವೆ.

ಅಲ್ಲದೇ ಮುಸ್ಲಿಂ ಯೂಟ್ಯೂಬರ್ ಮತ್ತು ಅವನ ಸಹಚರರು ದೇವಾಲಯದ ಹೆಸರು ಹಾಳು ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಅವರಿಗೆ ವಿದೇಶದ ಹಣ ಬಂದಿದೆ ಎಂಬ ವರದಿ ಇದೆ. ಆದ್ದರಿಂದ ಯೂಟ್ಯೂಬರ್ಸ್ ಮತ್ತು ಇತರರು ದೇವಾಸ್ಥಾನದ ವಿರುದ್ಧ ಯುದ್ಧ ಸಾರಿದ್ದಾರೆ. ಆದ್ದರಿಂದ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕು. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ವಿದೇಶಿ ಹಣ ಬಂದಿರುವ ಕುರಿತು ಇಡಿ ತನಿಖೆಗೆ ಆದೇಶ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಂಸದರು ಹೇಳಿದ್ದಾರೆ.

Previous articleವಿಷ್ಣು ಸ್ಮಾರಕಕ್ಕಾಗಿ ಜಾಗ ಖರೀದಿಸಿದ ಸುದೀಪ್: ಸೆ. 18ರಂದು ಅಡಿಗಲ್ಲು
Next articleನಿರಂತರ ಮಳೆಗೆ ಕಂಗಾಲಾದ ಹುಬ್ಬಳ್ಳಿ-ಧಾರವಾಡ ನಗರದ ಜನ

LEAVE A REPLY

Please enter your comment!
Please enter your name here