ಸಕಾಲದಲ್ಲಿ ಆದಾಯ ತೆರಿಗೆ ಪಾವತಿ ಮಾಡದಿದ್ದರೆ ಪ್ರತಿ ಮಾಸಿಕ ಶೇ.1ರಷ್ಟು ಬಡ್ಡಿದರದೊಂದಿಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಒಂದೊಮ್ಮೆ ತೆರಿಗೆ ಮೋಸ ಮಾಡಿರುವುದು ಕಂಡುಬಂದರೆ ಆದಾಯದ ಶೇ.50 ರಷ್ಟು ದಂಡವನ್ನು ಆದಾಯ ತೆರಿಗೆ ಇಲಾಖೆ ವಿಧಿಸುತ್ತದೆ.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ಜನ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಬೆಂಗಳೂರು ವಿಭಾಗದ ಸಹಾಯಕ ಆಯುಕ್ತ ಪಂಕಜ್ ದ್ವಿವೇದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಕಜ್ ದ್ವಿವೇದಿ ಮಾತನಾಡಿ, “ಆದಾಯ ತೆರಿಗೆ ನೀತಿ ನಿಬಂಧನೆ ಹಾಗೂ ತಿದ್ದುಪಡಿಗಳ ಕುರಿತು ತೆರಿಗೆ ಪಾವತಿದಾರು, ವ್ಯಾಪಾರಿಗಳು ಹಾಗೂ ಚಾರ್ಟೆಡ್ ಅಕೌಂಟೆಂಟ್‌ಗಳೊಂದಿಗೆ ರಾಜ್ಯದ ವಿವಿಧ ನಗರಗಳಲ್ಲಿ ಜನಸಂಪರ್ಕ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಆದಾಯ ತೆರಿಗೆ ಪಾವತಿ ಈಗ ಸುಲಭ: “ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಆನ್‍ಲೈನ್ ಮೂಲಕ ನಿರ್ವಹಿಸಬಹುದಾಗಿದೆ. ಈ ವೇಳೆ ಸಾಕಷ್ಟು ಪ್ರಶ್ನೆಗಳು ತೆರಿಗೆ ಪಾವತಿದಾರರಲ್ಲಿ ಮೂಡುವುದು ಸಹಜ. ಇಂತಹ ಪ್ರಶ್ನೆಗಳು ಹಾಗೂ ಗೊಂದಲಗಳನ್ನು ಜನಸಂಪರ್ಕ ಸಂವಹನ ಕಾರ್ಯಕ್ರಮದ ಮೂಲಕ ಪರಿಹರಿಸಲಾಗುವುದು” ಎಂದರು.
“ವ್ಯಾಪಾರಿಗಳು, ತೆರಿಗೆ ಪಾವತಿದಾರರು ಹಾಗೂ ಚಾರ್ಟೆಡ್ ಅಕೌಂಟೆಂಟ್ ಕಾರ್ಯಕ್ರಮದಲ್ಲಿ ತಮ್ಮ ಸಂದೇಹಗಳನ್ನು ಪ್ರಸ್ತಾಪಿಸಿ, ಉತ್ತರ ಪಡೆಯಬಹುದಾಗಿದೆ. ಇಲಾಖೆ ಅಧಿಕಾರಿಗಳು ತೆರಿಗೆ ಸಂಬಂಧಿಸಿದ ನೂತನ ನೀತಿ ನಿಬಂಧನೆಗಳ ಕುರಿತು ಬೆಳಕು ಚೆಲ್ಲುವರು” ಎಂದು ಪಂಕಜ್ ದ್ವಿವೇದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತೆರಿಗೆ ಸಲ್ಲಿಕೆ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿ ರಮಾಮಣಿ, “ತೆರಿಗೆ ಎನ್ನುವುದು ದೇಶ ನಿರ್ಮಾಣಕ್ಕೆ ನಾವು ನೀಡುವ ಕೊಡುಗೆಯಾಗಿದೆ. ಪ್ರಖ್ಯಾತ ಅರ್ಥಶಾಸ್ತ್ರಜ್ಞ ಕೌಟಿಲ್ಯ ತೆರಿಗೆ ರಾಜ್ಯಾದಾಯದ ಮೂಲಾಧಾರವಾಗಿದೆ ಎಂದು ಹೇಳಿದ್ದಾರೆ. ಅವರ ಪ್ರಸಿದ್ಧ ಹೇಳಿಕೆ ಕೋಶ ಮೂಲ ದಂಡಃ ಎನ್ನುವ ಉಕ್ತಿ ಆದಾಯ ತೆರಿಗೆ ಇಲಾಖೆ ಧ್ಯೇಯ ವಾಕ್ಯವಾಗಿದೆ” ಎಂದರು.
“ತೆರಿಗೆ ಸಂಗ್ರಹದಲ್ಲಿ ನೇರ ಹಾಗೂ ಪರೋಕ್ಷ ಎಂಬ ಎರಡು ವಿಧಗಳಿವೆ. ಆದಾಯ ಮಿತಿಗಿಂತ ಹೆಚ್ಚು ಸಂಪಾದಿಸಿದರೆ ಸಾರ್ವಜನಿಕರು ನೇರ ತೆರಿಗೆ ಸಲ್ಲಿಸಬೇಕಾಗುತ್ತದೆ. ಪರೋಕ್ಷ ತೆರಿಗೆಯನ್ನು ಸರಕು ಸಾಮಗ್ರಿಗಳ ವಹಿವಾಟಿನ ಮೇಲೆ ವಿಧಿಸಲಾಗುತ್ತದೆ” ಎಂದು ವಿವರಣೆ ನೀಡಿದರು.
“ತೆರಿಗೆ ಹಣದಲ್ಲಿ ದೇಶದ ರಕ್ಷಣೆ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಪ್ರತಿ ವರ್ಷ ಜುಲೈನಿಂದ ಸೆಪ್ಟಂಬರ್ ಅಂತ್ಯದವರೆಗೆ ತೆರಿಗೆ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರ ಹೊರತಾಗಿಯೂ ವಿವಿಧ ಕಾರಣಗಳಿಂದ ತೆರಿಗೆ ಸಲ್ಲಿಕೆ ತಡವಾದರೆ ಆದಾಯ ತೆರಿಗೆ ಸೆಕ್ಷನ್ 139(8ಎ) ಅಡಿ ಪರಿಷ್ಕೃತ ತೆರಿಗೆ ಸಲ್ಲಿಕೆಗೆ ಅವಕಾಶವಿದೆ” ಎಂದು ತಿಳಿಸಿದರು.
“ಸಕಾಲದಲ್ಲಿ ಆದಾಯ ತೆರಿಗೆ ಪಾವತಿ ಮಾಡದಿದ್ದರೆ ಪ್ರತಿ ಮಾಸಿಕ ಶೇ.1 ರಷ್ಟು ಬಡ್ಡಿದರದೊಂದಿಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ತಡವಾದ ಆದಾಯ ಸಲ್ಲಿಕೆಗೆ ರೂ.5000 ದಂಡ ತೆರಬೇಕಾಗುತ್ತದೆ. ಒಂದೊಮ್ಮೆ ತೆರಿಗೆ ಮೋಸ ಮಾಡಿರುವುದು ಕಂಡುಬಂದರೆ ಆದಾಯದ ಶೇ.50 ರಷ್ಟು ದಂಡವನ್ನು ಆದಾಯ ತೆರಿಗೆ ಇಲಾಖೆ ವಿಧಿಸುತ್ತದೆ” ಎಂದರು.
“ಗಂಭೀರ ಖಾಯಿಲೆ, ಅಪಘಾತದಂತಹ ಸಂದರ್ಭದಲ್ಲಿ ಸಕಾಲದಲ್ಲಿ ತೆರಿಗೆ ಸಲ್ಲಿಸಲು ಆಗದಿದ್ದರೆ, ಈ ಕಾರಣಗಳನ್ನು ನೀಡಿ ಸಹಾಯಕ ಆಯುಕ್ತರಿಗೆ ಮನವಿ ಮಾಡಿ ತಡವಾಗಿ ಆದಾಯ ತೆರಿಗೆ ಸಲ್ಲಿಕೆ ಮಾಡಲು ಅವಕಾಶವಿದೆ. ಈ ಸೌಲಭ್ಯವನ್ನು ಆನ್ ಲೈನ್ ಮೂಲಕವೂ ಪಡೆಯಬಹುದಾಗಿದೆ” ಎಂದು ರಮಾಮಣಿ ತಿಳಿಸಿದರು.
“ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಪಾನ್‍ಕಾರ್ಡ್ ನಂಬರ್ ಬಳಸಿ ಆನ್ ಲೈನ್ ಮೂಲಕ ಹಂತ-1 ರಿಂದ 7 ವರಗೆ ಹಾಗೂ ಪರಿಷ್ಕೃತ ಆದಾಯ ತೆರಿಗೆಯನ್ನು ಸಹ ಸಲ್ಲಿಸಬಹುದು. ಟ್ಯಾಕ್ಸ್ ರೆಬಿಟ್ ಸಹ ಸಕಾಲದಲ್ಲಿ ಲಭಿಸಲಿದೆ” ಎಂದು ಹೇಳಿದರು.