Home ನಮ್ಮ ಜಿಲ್ಲೆ ಚಿತ್ರದುರ್ಗ ನಕಲಿ ಚಿನ್ನದ ಮೋಸ: ಇಬ್ಬರು ಆರೋಪಿಗಳ ಬಂಧನ, ರೂ. 27.77 ಲಕ್ಷ ನಗದು ಜಪ್ತಿ!

ನಕಲಿ ಚಿನ್ನದ ಮೋಸ: ಇಬ್ಬರು ಆರೋಪಿಗಳ ಬಂಧನ, ರೂ. 27.77 ಲಕ್ಷ ನಗದು ಜಪ್ತಿ!

0

ಚಳ್ಳಕೆರೆ: ಮನೆ ಬುನಾದಿಯಲ್ಲಿ ನಿಧಿ ಸಿಕ್ಕಿದೆ ಎಂದು ನಂಬಿಸಿ, ಅಸಲಿ ಚಿನ್ನದ ಸ್ಯಾಂಪಲ್ ಕೊಟ್ಟು ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನವನ್ನು ಮಾರಾಟ ಮಾಡಿ 30 ಲಕ್ಷ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ  ತಳಕು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ 27.77 ಲಕ್ಷ ನಗದು ಹಾಗೂ ಒಂದು ಮೋಟರ್‌ ಸೈಕಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 7ರಂದು ಆರೋಪಿಗಳು ತಮಿಳುನಾಡು ರಾಜ್ಯದ ವೆಲ್ಡನ್‌ ಎಂಬುವವರಿಗೆ ಮೊಬೈಲ್ ಮೂಲಕ ಕರೆ ಮಾಡಿ, ನಮ್ಮ ಮನೆ ಬುನಾದಿ ತೆಗೆಯುವಾಗ ನಿಧಿ ಸಿಕ್ಕಿದೆ, ಸ್ಥಳೀಯವಾಗಿ ಮಾರಾಟ ಮಾಡಲು ತೊಂದರೆಯಿದೆ, ನಿಮಗೆ ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ನಂಬಿಕೆ ಹುಟ್ಟಿಸಲು ಅಸಲಿ ಚಿನ್ನದ ನಾಣ್ಯದ ಸ್ಯಾಂಪಲ್ ಸಹ ನೀಡಿದ್ದಾರೆ.

ನಂತರ, ಅದೇ ದಿನಾಂಕದಂದು 7 ರಿಂದ 8 ಜನರು ವೆಲ್ಡನ್‌ ಅವರನ್ನು ತಳಕು ಠಾಣಾ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಚಿಕ್ಕಹಳ್ಳಿ ಗೇಟ್‌ಗೆ ಕರೆಸಿಕೊಂಡು, ಅಸಲಿ ಚಿನ್ನ ಕೊಡುವುದಾಗಿ ನಂಬಿಸಿ, ನಕಲಿ ಚಿನ್ನವನ್ನು ನೀಡಿ 30 ಲಕ್ಷ ನಗದು ಹಣವನ್ನು ಪಡೆದು ವಂಚಿಸಿದ್ದಾರೆ. ಈ ಬಗ್ಗೆ ವೆಲ್ಡನ್‌ ನೀಡಿದ ದೂರಿನ ಮೇರೆಗೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆ ಅರಿತು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಂಜಿತ್ ಕುಮಾರ ಭಂಡಾರು, ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಡಾ. ಆರ್ ಶಿವಕುಮಾರ್ ಮಾರ್ಗದರ್ಶನದಲ್ಲಿ, ಚಳ್ಳಕೆರೆ ಉಪವಿಭಾಗದ ಡಿವೈಎಸ್‌ಪಿ ಶ್ರೀ ಸತ್ಯನಾರಾಯಣ ರಾವ್ ನಿರ್ದೇಶನದಂತೆ ತನಿಖಾ ತಂಡವನ್ನು ರಚಿಸಲಾಗಿತ್ತು.

ಪೊಲೀಸ್ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಎಂ. ಶಿರೀಹಳ್ಳಿ  ನೇತೃತ್ವದಲ್ಲಿ ಪಿ.ಎಸ್.ಐ ಶಿವಕುಮಾರ ಕೆ, ಪ್ರೋ.ಪಿ.ಎಸ್.ಐ ಚೇತನ್, ಎ.ಎಸ್.ಐ ಮಂಜಣ್ಣ, ಹೆಚ್.ಸಿ ಗಳಾದ ನಿತಿನ್ ಕುಮಾರ್, ಮಂಜುನಾಥ, ಧನಂಜಯ, ಜಾಕೀರ್ ಹುಸೇನ್, ಬಸವರಾಜ್, ಚಂದ್ರಶೇಖರ್ ಹಾಗೂ ಪಿಸಿಗಳಾದ ನಾರಾಯಣ, ಉಮೇಶ್, ಜಗದೀಶ್, ಗಿರೀಶ್, ಮಂಜುನಾಥ, ಪುರುಷೋತ್ತಮ್, ವೀರೇಶ, ಮಾರೇಶ, ಸಂಗನ ಬಸಪ್ಪ, ದಿನೇಶ, ಬಸವರಾಜ್, ಪ್ರಕಾಶ್ ರವರನ್ನೊಳಗೊಂಡ  ವಿಶೇಷ ತಂಡದ ತೀವ್ರ ಕಾರ್ಯಾಚರಣೆಯ ನಂತರ, ಶಿವಮೊಗ್ಗ ಜಿಲ್ಲೆಯ ಅರವಿಂದಕುಮಾರ ಸಿ (30) ಮತ್ತು ವಿಜಯನಗರ ಜಿಲ್ಲೆಯ ನಾಗಪ್ಪ (39) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ವಂಚನೆಗೆ ಬಳಸಿದ್ದ 27,77,ಸಾವಿರ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಮೋಟರ್‌ ಸೈಕಲ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version