Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧಿಸಿದ ಇಡಿ

ಚಿತ್ರದುರ್ಗ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧಿಸಿದ ಇಡಿ

0

ಚಿತ್ರದುರ್ಗ: ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಕ್ಕಿಂನಿಂದ ಅವರನ್ನು ಬೆಂಗಳೂರು ನಗರಕ್ಕೆ ಕರೆತರಲಾಗುತ್ತಿದೆ.

ಶುಕ್ರವಾರ ಇಡಿ ಅಧಿಕಾರಿಗಳು ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ ಸೇರಿದಂತೆ ವೀರೇಂದ್ರ ಪಪ್ಪಿಗೆ ಸೇರಿದ 17 ಕಡೆಗಳಲ್ಲಿ ದಾಳಿಯನ್ನು ಮಾಡಿದ್ದರು. ಈ ದಾಳಿಯ ಬಳಿಕ ವಿದೇಶದಲ್ಲಿ ಬೆಟ್ಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಸಿಕ್ಕಿಂನಲ್ಲಿ ಕೆ.ಸಿ.ವೀರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರನ್ನು ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರು ನಗರಕ್ಕೆ ಕರೆದುಕೊಂಡು ಬರಲಾಗುತ್ತಿದೆ.

ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವೀರೇಂದ್ರ ಪಪ್ಪಿ ವಿಚಾರಣೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. ಸಿಕ್ಕಿಂನ ಗ್ಯಾಂಗ್‌ ಟಾಕ್‌ನಲ್ಲಿದ್ದ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿ, ಕರೆದುಕೊಂಡು ಬರುತ್ತಿದ್ದಾರೆ.

ಅಪಾರ ಪ್ರಮಾಣದ ಹಣ ಪತ್ತೆ: ಕನ್ನಡದ ಹಿರಿಯ ನಟ ದೊಡ್ಡಣ್ಣ ಅಳಿಯ, ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ನಿವಾಸದ ಮೇಲೆ ದಾಳಿ ಮಾಡಿದಾಗ ಅಪಾರ ಪ್ರಮಾಣದ ಹಣ, ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಸುಮಾರು 12 ಕೋಟಿ ರೂ. ಹಣ, 1 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.

ಈ ಕುರಿತು ಇಡಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದೆ. ಇಡಿ ಬೆಂಗಳೂರು ಘಟಕ 22/8/2025 ಮತ್ತು 23/8/2025ರಂದು ಗ್ಯಾಂಗ್‌ಟಾಕ್, ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧ್‌ಪುರ್, ಮುಂಬೈ ಮತ್ತು ಗೋವಾದಲ್ಲಿ ದಾಳಿಯನ್ನು ಮಾಡಿದೆ.

ಇಡಿ ತನ್ನ ಪ್ರಕಟಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಶಾಸಕ ಕೆ.ಸಿ.ವೀರೇಂದ್ರ ಮತ್ತು ಇತರರ ವಿರುದ್ಧ ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ (ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಸೇರಿದಂತೆ 5 ಕ್ಯಾಸಿನೊಗಳು ಸೇರಿದಂತೆ). ಶೋಧ ಕಾರ್ಯಾಚರಣೆಯ ಸಮಯದಲ್ಲಿ, ವಿವಿಧ ಅಪರಾಧ ದಾಖಲೆಗಳು, ರೂ. 12 ಕೋಟಿ ನಗದು (ಅಂದಾಜು), ಇದರಲ್ಲಿ (ಅಂದಾಜು) 1 ಕೋಟಿ ವಿದೇಶಿ ಕರೆನ್ಸಿ, ರೂ. 6 ಕೋಟಿ (ಅಂದಾಜು) ಮೌಲ್ಯದ ಚಿನ್ನಾಭರಣಗಳು, ಸುಮಾರು 10 ಕೆಜಿ ಬೆಳ್ಳಿ ವಸ್ತುಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಜೊತೆಗೆ 4 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಇದಲ್ಲದೆ 17 ಬ್ಯಾಂಕ್ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಕೆ.ಸಿ.ವೀರೇಂದ್ರ ಅವರನ್ನು 23.08.2025ರಂದು ಗ್ಯಾಂಗ್‌ಟಾಕ್‌ನಿಂದ ಬಂಧಿಸಿ ಸಿಕ್ಕಿಂನ ಗ್ಯಾಂಗ್‌ಟಾಕ್‌ನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಮತ್ತು ಬೆಂಗಳೂರಿನ ನ್ಯಾಯವ್ಯಾಪ್ತಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಹೇಳಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version