ಚಿಕ್ಕಮಗಳೂರು: ಕರ್ನಾಟಕದಲ್ಲಿ ಈಗಾಗಲೇ ಒಬ್ಬರು ಸಿಎಂ ಇದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲ. ಅದು ಖಾಲಿಯಾದ ಮೇಲೆ ಅದರ ಬಗ್ಗೆ ತೀರ್ಮಾನ ಮಾಡೋಣ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಗಾಂಧಿ ಜಯಂತಿ ಹಿನ್ನೆಲೆ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ. ಸಿ.ಎಲ್.ಪಿ. ಸಭೆಯಲ್ಲಿ 2-3 ವರ್ಷ ಅಂತ ಮಾಡಿಲ್ಲ. 5 ವರ್ಷಕ್ಕೆ ಮಾಡಿರೋದು. ಐದು ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಇಲ್ಲ ಅಂತ ಹೇಳಿದವರು ಯಾರೆಂದು ಪ್ರಶ್ನಿಸಿದ್ದಾರೆ.
ನಾನು ಎರಡು ವರ್ಷಕ್ಕೆ ಬಿಡುತ್ತೇನೆ ಎಂದು ಸಿಎಂ ಹೇಳುವುದಕ್ಕೆ ಆಗುತ್ತದೆಯೇ ಎಂದು ತಿಳಿಸಿ, ಸಿ.ಎಲ್.ಪಿ. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನು ಎಲ್ಲಾ ಶಾಸಕರು ಆಯ್ಕೆ ಮಾಡಿದ್ದಾರೆ. ಕಾಲದ ಗಡುವು ಇರುವುದಿಲ್ಲ. ಬದಲಾವಣೆ ಮಾಡಬೇಕಾದರೆ ಸಿ.ಎಲ್.ಪಿ. ನಾಯಕರು, ಹೈಕಮಾಂಡ್ ಇದ್ದಾರೆ, ಅವರು ಕ್ರಮ ಕೈಗೊಳ್ತಾರೆ ಎಂದರು.
ಮಾಜಿ ಸಂಸದ ಶಿವರಾಮೇಗೌಡ ಎ.ಐ.ಸಿ.ಸಿ. ಅಧ್ಯಕರೇ, ಪ್ರಧಾನ ಕಾರ್ಯದರ್ಶಿಗಳೇ, ಇಲ್ಲ ರಾಜ್ಯದ ಉಸ್ತುವಾರಿನಾ ಅವರ ಮಾತಿಗೆ ಅಷ್ಟೊಂದು ಪ್ರಾಮುಖ್ಯತೆ ಏಕೆ ಕೊಡ್ತೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಶಾಸಕರೆಲ್ಲ ಸೇರಿ ಶಾಸಕಾಂಗ ಸಭೆಯ ನಾಯಕನನ್ನ ಆಯ್ಕೆ ಮಾಡಿದ್ದೇವೆ 2-3 ವರ್ಷ ಅಂತ ಗಡುವು ಹಾಕಿಲ್ಲ. ಸಿ.ಎಲ್.ಪಿ ನಾಯಕರನ್ನು ಪೂರ್ತಿ ಅವಧಿಗೆ ಸೆಲೆಕ್ಟ್ ಮಾಡಿದ್ದೇವೆ. ಆದರೆ ಬದಲಾವಣೆ ಮಾಡುವುದು ಸಿ.ಎಲ್.ಪಿ. ಹಾಗೂ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್‌ಗೆ ಏಕೆ ಅವಕಾಶ ಇಲ್ಲ. ಎಲ್ಲರಿಗೂ ಅವಕಾಶ ಇದೆ. ಸದ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಖಾಲಿ ಆದಾಗ ಅದರ ಬಗ್ಗೆ ತೀರ್ಮಾನ ಮಾಡೋಣವೆಂದು ಹೇಳಿದರು.