Home ನಮ್ಮ ಜಿಲ್ಲೆ ಚಿಕ್ಕಮಗಳೂರು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

0

ಚಿಕ್ಕಮಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯ ಅಂಗವಾಗಿ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಮಾಹಿತಿಯ ಪ್ರಕಾರ, ಚಿಕ್ಕಮಗಳೂರಿನ ಬಸಾಪುರದಲ್ಲಿರುವ ರಾಜೇಗೌಡ ಅವರ ನಿವಾಸದಲ್ಲಿ ಬೆಳಗಿನ ಜಾವ ಲೋಕಾಯುಕ್ತ ಅಧಿಕಾರಿಗಳು ಅಚ್ಚರಿದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಕೋರ್ಟ್ ನಿರ್ದೇಶನದಂತೆ, ರಾಜೇಗೌಡ, ಅವರ ಪತ್ನಿ ಪುಷ್ಪ ಹಾಗೂ ಪುತ್ರನ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬಿಜೆಪಿ ಮುಖಂಡ ದಿನೇಶ್ ಹೊಸೂರು ಅವರು ರಾಜೇಗೌಡ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದೊಂದಿಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಸಂಪೂರ್ಣ ಆಸ್ತಿ ಘೋಷಣೆ ಮಾಡದಿರುವುದು ಕೂಡ ಪ್ರಕರಣದ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.

ಈ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯವು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಗೆ ಪ್ರಕರಣ ದಾಖಲಿಸಲು ಸೂಚನೆ ನೀಡಿತ್ತು. ಬಳಿಕ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ರಾಜೇಗೌಡ ಅವರು ಈಗಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ವಿರುದ್ಧದ ಅಕ್ರಮ ಆಸ್ತಿ ಆರೋಪಗಳು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.

ಇಂದಿನ ದಾಳಿ ಬಳಿಕ ಅಧಿಕಾರಿಗಳು ದಾಖಲೆಗಳು, ಆಸ್ತಿ ವಿವರಗಳು ಹಾಗೂ ಹಣಕಾಸು ಸಂಬಂಧಿತ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಆಸ್ತಿ ಮತ್ತು ದಾಖಲೆಗಳ ಶೋಧ ನಡೆಯುವ ಸಾಧ್ಯತೆ ಇದೆ. ಈ ಬೆಳವಣಿಗೆ ಶೃಂಗೇರಿ ಹಾಗೂ ಚಿಕ್ಕಮಗಳೂರಿನ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version