ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಸರ್ಕಾರಿ ನೌಕರರ ಆರೋಪ ಸಾಬೀತಾಗಿದ್ದು, ಧಾರವಾಡ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ದೋಷಿ ಎಂದು ತೀರ್ಪು ನೀಡಿದ್ದಾರೆ.
ಆಪಾದಿತ ಸರ್ಕಾರಿ ಅಧಿಕಾರಿಗಳಾದ ಮಧುಕರ ಘೋಡಕೆ, ಎಸ್.ಎನ್.ಲೀಲಾವತಿ ದೋಷಿಯಾಗಿದ್ದು, ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಲಾಗಿದೆ. ಧಾರವಾಡ ಲೋಕಾಯುಕ್ತ, ಎಸಿಬಿ ಪೊಲೀಸ್ ಠಾಣೆ ಕ್ರೈಂ ನಂಬರ 06/2017, ಕಲಂ. 7, 8, 13(1)(ಡಿ) ಸಹ ಕಲಂ.13(2) ಪಿ.ಸಿ. ಆ್ಯಕ್ಟ್-1988ರ ಆಪಾದಿತ ಸರ್ಕಾರಿ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಮಧುಕರ ಘೋಡಕೆ (ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಎಪಿಎಂಸಿ, ಹುಬ್ಬಳ್ಳಿ) ಎಸ್.ಎನ್.ಲೀಲಾವತಿ (ಎಸ್.ಡಿ.ಎ., ಕಾನೂನು ಮಾಪನ ಶಾಸ್ತ್ರ ಇಲಾಖೆ, ಎಪಿಎಂಸಿ, ಹುಬ್ಬಳ್ಳಿ) ಇವರನ್ನು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡದ ನ್ಯಾಯಾಧಿಶರಾದ ಜರೀನಾ ಅವರು ದೋಷಿಯೆಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ.
ಮಧುಕರ ಘೋಡಕೆ ದೂರುದಾರ ಗೋಕುಲ ಸೌದಾಗರ ಮತ್ತು ಆತನ ಗೆಳೆಯ ಸುನೀಲ್ ಬಾಕಳೆ ಅವರ ಬಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ರಾಘವೇಂದ್ರ ಯಳವತ್ತಿ (ಬೆರಳಚ್ಚುಗಾರರು (ಗುತ್ತಿಗೆ ಆಧಾರ), ಕಾನೂನು ಮಾಪನ ಶಾಸ್ತ್ರ ಇಲಾಖೆ, ಎಪಿಎಂಸಿ, ಹುಬ್ಬಳ್ಳಿ) ಮುಖಾಂತರ 10,000 ರೂ. ಲಂಚದ ಹಣ ಪಡೆದುಕೊಂಡಿರುತ್ತಾರೆ.
ಎಸ್.ಎನ್.ಲೀಲಾವತಿ ಲಂಚದ ಹಣ ಕೊಡುವಂತೆ ದೂರುದಾರರಿಗೆ ಪ್ರಚೋದನೆ ನೀಡಿರುತ್ತಾರೆ. ಈ ಮೂಲಕ ಮೂವರು ಆರೋಪಿಗಳು ಅಪರಾಧದಲ್ಲಿ ಭಾಗಿಯಾಗಿ ನ್ಯಾಯಯುತವಾಗಿ ಮಾಡಬೇಕಾದ ಕೆಲಸಕ್ಕೆ ಲಂಚದ ಹಣ 10,000 ರೂ.ಗಳನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ಲೋಕಾಯುಕ್ತ ಎಸಿಬಿ ಪೊಲೀಸ್ ಠಾಣೆ ಧಾರವಾಡ ಅಧಿಕಾರಿಗಳ ಬಲೆಗೆ ಬಿದ್ದು, ಅಂದಿನ ಲೋಕಾಯುಕ್ತ ಎಸಿಬಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಮೋದ ಸಿ. ಯಲಿಗಾರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡದ ನ್ಯಾಯಾಧಿಶರಾದ ಜರೀನಾ ಅವರು ದಿನಾಂಕ 04-09-2025ರಂದು ವಿಚಾರಣೆ ಪೂರ್ಣಗೊಳಿಸಿದ್ದರು.
ಮಧುಕರ ಘೋಡಕೆ, ಎಸ್.ಎನ್.ಲೀಲಾವತಿ ಇವರುಗಳ ವಿರುದ್ಧದ ಅಪರಾಧ ಸಾಬೀತಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ.7 ಅಡಿಯಲ್ಲಿ ತಲಾ 4 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ರೂ.10,000 ದಂಡ ವಿಧಿಸಿರುತ್ತಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ.13(1) (ಡಿ) ರೆ/ವಿ ಕಲಂ.13(2)ರ ಅಡಿಯಲ್ಲಿ ತಲಾ 5 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ರೂ.10,000 ದಂಡ ವಿಧಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಎಸ್.ಎಸ್. ಶಿವಳ್ಳಿ ವಾದ ಮಂಡಿಸಿದ್ದರು.