ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಹಲವಾರು ಜನರಿಗೆ ಸಂಕಷ್ಟ ತಂದಿದೆ. ಮಳೆಯಿಂದ ಆದ ಹಾನಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ 30ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಮಳೆಯಿಂದ ಆದ ಹಾನಿ ಕುರಿತು ವಿವರಣೆ ನೀಡಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದಾರೆ.
ಮನವಿ ಪತ್ರದ ವಿವರ: ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಋತುಮಾನಗಳಲ್ಲಿ ಏರುಪೇರಾಗುತ್ತಿದ್ದು, ಇದರ ಪರಿಣಾಮ ಗಡಿ ಜಿಲ್ಲೆ ಬೀದರ್ ಮೇಲೂ ಆಗುತ್ತಿದೆ, ಹೆಚ್ಚಿನ ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಇಲ್ಲದ ನಮ್ಮ ಜಿಲ್ಲೆಯ ಶೇ.75ರಷ್ಟು ಜನರ ಬದುಕು ಕೃಷಿಯನ್ನೇ ಅವಲಂಬಿಸಿದೆ.
ಈ ವರ್ಷ 4.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಆದರೆ, ಆಗಸ್ಟ್ ತಿಂಗಳಲ್ಲೇ ಅನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದು ಮಳೆಯಿಂದ ರೈತಾಪಿ ಜನರು ಕಂಗಾಲಾಗಿದ್ದಾರೆ. ಆಗಸ್ಟ್‌ನಲ್ಲಿ ಸುರಿದ ಪ್ರಥಮ ಮಳೆಗೆ ಶೇ.25ರಷ್ಟು ಬೆಳೆ ನಷ್ಟವಾಗಿತ್ತು. ಈಗ ಸೆಪ್ಟೆಂಬರ್‌ನಲ್ಲಿ ಮತ್ತ ವಿಪರೀತ ಮಳೆ ಸುರಿಯುತ್ತಿದ್ದು, ರಾಶಿಗೆ ಬಂದ ಹೆಸರು, ಉದ್ದು, ತೂಗರಿ, ಸೋಯಾ ಸೇರಿದಂತೆ ಎಲ್ಲ ಬೆಳೆ ಸಂಪೂರ್ಣ ಹಾನಿಯಾಗಿದೆ.
ಇದರಿಂದ ನಮ್ಮ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವಾರದ ಅವಧಿಯಲ್ಲಿ ಒಂದು ತಿಂಗಳ ಮಳೆ ಬೀಳುತ್ತಿರುವ ಪರಿಣಾಮ, ಹಲವು ಸೇತುವೆಗಳು ಕುಸಿದು ಸಂಪರ್ಕ ಕಡಿತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ ಅನೇಕ ಗ್ರಾಮಗಳು ವಿದ್ಯುತ್ ಇಲ್ಲದ ಅಂಧಕಾರದಲ್ಲಿ ಮುಳುಗಿವೆ. ಭಾರೀ ಮಳೆಗೆ ಶಾಲಾ ಕೊಠಡಿ, ಅಂಗನವಾಡಿ ಕಟ್ಟಡ, ಆಸ್ಪತ್ರೆ, ಸರ್ಕಾರಿ ಕಚೇರಿಗಳೂ ಸೋರುವಂತಾಗಿದೆ.
ಪ್ರವಾಹದಿಂದಾಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು, ಭೂಮಿ ಸವಳು ಜವಳಾಗಿದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ತಾವು, ಬೀದರ್ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ತುರ್ತು ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಲು ವಿನಂತಿಸುತ್ತೇನೆ ಎಂದು ಮನವಿ ಸಲ್ಲಿಸಿದ್ದರು.
ಪೌರಾಡಳಿತ ಸಚಿವ ರಹೀಂ ಖಾನ್ ಜೊತೆ ಮುಖ್ಯಮಂತ್ರಿಗಳನ್ನು ಈಶ್ವರ ಖಂಡ್ರೆ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಸೆಪ್ಟೆಂಬರ್ 30ರಂದು ವೈಮಾನಿಕ ಸಮೀಕ್ಷೆ ನಡೆಸುತ್ತೇನೆ ಎಂದು ಭವರಸೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ: ನೆರೆ ಸಂಕಷ್ಟದಿಂದ ಹೈರಾಭಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಲಿ, ಸೂಕ್ತ ತುರ್ತು ಪರಿಹಾರ ತಕ್ಷಣ ಘೋಷಿಸಲಿ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸೋಮವಾರ ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಬೀದರ್ ದಕ್ಷಿಣ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲನೆ ನಡೆಸಿದರು. ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ನೆರೆ ಹಾವಳಿಯ ಕುರಿತು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ, ನಿರ್ಲಕ್ಷ್ಯ ತೋರಿದ ರೈತ ಕಾಳಜಿ ಇಲ್ಲದ ರಾಜ್ಯ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ನೆರೆ ಹಾವಳಿಯಿಂದ ತತ್ತರ ಗೊಂಡಿರುವ ಜನರ ಹಾಗೂ ರೈತರ ನೆರವಿಗೆ ಧಾವಿಸದೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.