Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: 24ರಂದು ದಿನಪೂರ್ಣ ಸಂಗೀತ-ನೃತ್ಯ ಸಂಭ್ರಮ

ಬೆಂಗಳೂರು: 24ರಂದು ದಿನಪೂರ್ಣ ಸಂಗೀತ-ನೃತ್ಯ ಸಂಭ್ರಮ

0

ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ‘ಉಡುಪ ಸಂಗೀತೋತ್ಸವ’ ಸಂಭ್ರಮ ಮುದ ನೀಡಲು ಅಣಿಯಾಗಿದೆ.

ಉದ್ಯಾನ ನಗರಿಯ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಆಗಸ್ಟ್ 24ರಂದು ದಿನಪೂರ್ಣ ಸಂಗೀತ – ನೃತ್ಯ ಸಮಾರಾಧನೆ ನೆರವೇರಲಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ವಾದನ- ಗಾಯನ ಮತ್ತು ನರ್ತನದ ಮೂಲಕ ಸಂಗೀತ ರಸಿಕರ ಮನ ತಣಿಸಲಿದ್ದಾರೆ. ಪ್ರವೇಶ ಉಚಿತವಾಗಿದೆ. ಅಂದು ಬೆಳಗ್ಗೆ 10ಕ್ಕೆ ತಾಳವಾದ್ಯ- ಕಛೇರಿ ಆಯೋಜನೆಗೊಂಡಿದೆ.

ಹೆಸರಾಂತ ವಿದ್ವಾಂಸರಾದ ಅದಮ್ಯ ರಮಾನಂದ, ಅನಿರುದ್ಧ ಎಸ್. ಭಟ್, ಸೋಮಶೇಖರ ಜೋಯಿಸ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ 22 ಕಲಾವಿದರು ತಾಳವಾದ್ಯದ ಹೊಸ ರಂಗುಗಳನ್ನು ಕಲಾ ರಸಿಕರಿಗೆ ಸಮರ್ಪಿಸಲಿದ್ದಾರೆ. ಮೃದಂಗ, ಖಂಜಿರ, ಘಟ, ಕೊನ್ನಕೋಲ್ ಮತ್ತು ಮೊರ್ಸಿಂಗ್ ವಾದ್ಯಗಳು ಅನುರಣಿಸಲಿವೆ. ಕಣ್ಮನಗಳನ್ನು ತಣಿಸುವ ಈ ಕಾರ್ಯಕ್ರಮವನ್ನು ನೋಡುವುದೇ ಒಂದು ಸೊಗಸಾಗಲಿದೆ.

ಬೆಳಗ್ಗೆ 11ಕ್ಕೆ ವಿಶೇಷ ಗಾಯನ ಕಛೇರಿ ಸಂಪನ್ನಗೊಳ್ಳಲಿದೆ. ಪ್ರಖ್ಯಾತ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಂದ ಶಾಸ್ತ್ರೀಯ ಸಂಗೀತ ಗಾಯನವಿದೆ. ಪಕ್ಕವಾದ್ಯದಲ್ಲಿ ಪ್ರಖ್ಯಾತ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರ ಮೃದಂಗ, ಚಾರುಲತಾ ರಾಮಾನುಜಂ (ಪಿಟೀಲು), ಓಂಕಾರ್ (ಘಟಂ) ಮತ್ತು ವಿದ್ವಾನ್ ಎಸ್.ವಿ. ಗಿರಿಧರ ಮೋರ್ಸಿಂಗ್ ಸಹಕಾರ ನೀಡಲಿದ್ದಾರೆ.

ಭರತನಾಟ್ಯ ಪ್ರಸ್ತುತಿ: ಭಾನುವಾರ ಸಂಜೆ 5 ಗಂಟೆಗೆ ಹಿರಿಯ ಭರತನಾಟ್ಯ ವಿದ್ವಾಂಸ ವಿದ್ವಾನ್ ಸತ್ಯನಾರಾಯಣ ರಾಜು, ವಿದುಷಿ ಮೀರಾ ಶ್ರೀ ನಾರಾಯಣನ್ ಹಾಗೂ ಉದಯೋನ್ಮುಖ ಕಲಾವಿದೆ ಯುಕ್ತಿ ಉಡುಪ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಗೊಳ್ಳಲಿದೆ. ತಂಜಾವೂರು ಸಹೋದರರ ರಚನೆಯ ಅಷ್ಟರಾಗ ಮಾಲಿಕಾ ವರ್ಣವನ್ನು ಈ ಕಲಾವಿದರು ಪಡಮೂಡಿಸಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version