Home ನಮ್ಮ ಜಿಲ್ಲೆ ಬೆಂಗಳೂರು ಸುರಂಗಕಿಂತ ಈ 5 ಐಡಿಯಾಗಳೇ ಬೆಸ್ಟ್: ಬೆಂಗಳೂರು ಟ್ರಾಫಿಕ್‌ಗೆ ತೇಜಸ್ವಿ ಕೊಟ್ಟ ಮಾಸ್ಟರ್‌ ಪ್ಲಾನ್!

ಸುರಂಗಕಿಂತ ಈ 5 ಐಡಿಯಾಗಳೇ ಬೆಸ್ಟ್: ಬೆಂಗಳೂರು ಟ್ರಾಫಿಕ್‌ಗೆ ತೇಜಸ್ವಿ ಕೊಟ್ಟ ಮಾಸ್ಟರ್‌ ಪ್ಲಾನ್!

0

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ  ಬಂದಿರುವ ದುಬಾರಿ ಸುರಂಗ ರಸ್ತೆ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಂಸದ ತೇಜಸ್ವಿ ಸೂರ್ಯ ಪರ್ಯಾಯ ಮತ್ತು ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಅವರು, 47, ಸಾವಿರ ಕೋಟಿ ರೂಪಾಯಿಗಳ ಸುರಂಗ ಮಾರ್ಗವು ಶ್ರೀಮಂತರಿಗೆ ಮಾತ್ರ ಸೀಮಿತವಾಗಲಿದ್ದು, ಸಾಮಾನ್ಯ ಜನರ ತೆರಿಗೆ ಹಣವನ್ನು ಪೋಲು ಮಾಡಿದಂತಾಗುತ್ತದೆ ಎಂದು ವಾದಿಸಿದ್ದಾರೆ. ಬದಲಾಗಿ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಐದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ಸುರಂಗ ರಸ್ತೆ ಯಾಕೆ ಬೇಡ? ಸಂಸದರ ಪ್ರಬಲ ವಾದಗಳು: ಸುರಂಗ ರಸ್ತೆಯಿಂದ ಟ್ರಾಫಿಕ್ ಕಡಿಮೆಯಾಗುವ ಬದಲು, ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬುದು ತೇಜಸ್ವಿ ಸೂರ್ಯ ವಾದ.

ದುಬಾರಿ ಟೋಲ್: ಯೋಜನೆಯ ಪ್ರಕಾರ, ಒಂದು ಬಾರಿ ಸಂಚಾರಕ್ಕೆ ರೂ.330 ಮತ್ತು ಹೋಗಿ ಬರಲು ರೂ.650 ಟೋಲ್ ವಿಧಿಸುವ ಸಾಧ್ಯತೆಯಿದೆ. ಇದು ಸಾಮಾನ್ಯ ಜನರಿಗೆ ಸಂಪೂರ್ಣವಾಗಿ ಕೈಗೆಟುಕದ ಯೋಜನೆ.

ಹೊಸ ಟ್ರಾಫಿಕ್ ಜಾಮ್‌ಗಳು: ಸುರಂಗದ ಪ್ರವೇಶ ಮತ್ತು ನಿರ್ಗಮನಕ್ಕಾಗಿ ನಿರ್ಮಿಸುವ 22 ರ‍್ಯಾಂಪ್‌ಗಳು, 22 ಹೊಸ ಟ್ರಾಫಿಕ್ ದಟ್ಟಣೆಯ ಕೇಂದ್ರಗಳನ್ನು ಸೃಷ್ಟಿಸುತ್ತವೆ.

ಅಂತರಾಷ್ಟ್ರೀಯ ವೈಫಲ್ಯ: ದಕ್ಷಿಣ ಕೊರಿಯಾ, ಚೀನಾದಂತಹ ದೇಶಗಳು ತಾವು ಕಟ್ಟಿದ ಮೇಲ್ಸೇತುವೆಗಳನ್ನೇ ಈಗ ಕೆಡವುತ್ತಿವೆ. ಲಾಸ್ ಏಂಜಲೀಸ್‌ನಲ್ಲಿಯೂ ಇದೇ ಮಾದರಿಯ ಯೋಜನೆ ಕೈಬಿಡಲಾಗಿದೆ.

ಹಾಗಾದರೆ, ಬೆಂಗಳೂರಿಗೆ ನಿಜವಾದ ಪರಿಹಾರವೇನು?: ಸುರಂಗ ರಸ್ತೆಯ ಬದಲು, ರೈಲು ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದೇ ಬೆಂಗಳೂರಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ತೇಜಸ್ವಿ ಸೂರ್ಯ ಪ್ರತಿಪಾದಿಸಿದ್ದಾರೆ. ಅವರು ಮುಂದಿಟ್ಟಿರುವ ಐದು ಪ್ರಮುಖ ಸಲಹೆಗಳು ಹೀಗಿವೆ.

1. ಮೆಟ್ರೋಗೆ ಮೊದಲ ಆದ್ಯತೆ: ಪ್ರತಿದಿನ ಲಕ್ಷಾಂತರ ಜನರು ಮೆಟ್ರೋ ಬಳಸುತ್ತಿರುವುದೇ ಅದರ ಯಶಸ್ಸಿಗೆ ಸಾಕ್ಷಿ. ವಿಳಂಬವಾಗುತ್ತಿರುವ ಎಲ್ಲಾ ಮೆಟ್ರೋ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು “ವಿಶೇಷ ವಾರ್ ರೂಮ್” ಸ್ಥಾಪಿಸಬೇಕು. ಟಿಕೆಟ್ ದರವನ್ನು ಕಡಿಮೆ ಮಾಡಿ, ಕೊನೆಯ ಮೈಲಿ ಸಂಪರ್ಕಕ್ಕಾಗಿ ಮಿನಿ ಬಸ್‌ಗಳ ವ್ಯವಸ್ಥೆ ಮಾಡಬೇಕು.

2. ಉಪನಗರ ರೈಲು (ಸಬ್-ಅರ್ಬನ್ ರೈಲು): ಕಡಿಮೆ ವೆಚ್ಚದಲ್ಲಿ 314 ಕಿ.ಮೀ. ವ್ಯಾಪ್ತಿಯಲ್ಲಿ ಲಕ್ಷಾಂತರ ಜನರನ್ನು ಸಾಗಿಸಬಲ್ಲ ಉಪನಗರ ರೈಲು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅನುದಾನ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಕುಂಟುತ್ತಿರುವ ಈ ಯೋಜನೆಗೆ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

3. ನಗರದೊಳಗೆ ಟ್ರ್ಯಾಮ್ ಸಂಚಾರ: ನಗರದ ಪ್ರಮುಖ ರಸ್ತೆಗಳಲ್ಲೇ ಹಳಿಗಳ ಮೇಲೆ ಸಂಚರಿಸುವ ಆಧುನಿಕ ಟ್ರ್ಯಾಮ್‌ಗಳನ್ನು ಪರಿಚಯಿಸಬೇಕು. ಇದು ಕಡಿಮೆ ದೂರದ ಪ್ರಯಾಣಕ್ಕೆ ಅತ್ಯುತ್ತಮ ಪರಿಹಾರವಾಗಿದ್ದು, ರಸ್ತೆ ಮೇಲಿನ ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

4. ಸಾರ್ವಜನಿಕ ಬಸ್‌ ವ್ಯವಸ್ಥೆಗೆ ಬಲ: ಬಿಎಂಟಿಸಿಗೆ ತಕ್ಷಣ 5 ಸಾವಿರ ಹೊಸ ಬಸ್‌ಗಳನ್ನು ಸೇರಿಸಬೇಕು. ಹೊರ ವರ್ತುಲ ರಸ್ತೆಯಲ್ಲಿ ಬಸ್‌ಗಳಿಗಾಗಿಯೇ ಪ್ರತ್ಯೇಕ ಬಿಆರ್‌ಟಿಎಸ್ ಕಾರಿಡಾರ್ ನಿರ್ಮಿಸಬೇಕು. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುತ್ತದೆ.

5. ಪೆರಿಫೆರಲ್ ರಿಂಗ್ ರೋಡ್ (PRR) ಮತ್ತು ಪಾದಚಾರಿ ಮಾರ್ಗ: ನಗರದ ಹೊರವಲಯದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬಿಡಿಎ ಪ್ರಸ್ತಾಪಿಸಿರುವ ಪಿಆರ್‌ಆರ್‌ ರಸ್ತೆಯನ್ನು ತಕ್ಷಣವೇ ನಿರ್ಮಿಸಬೇಕು. ಜೊತೆಗೆ, ನಗರವನ್ನು ವಾಕಿಂಗ್-ಸ್ನೇಹಿಯಾಗಿಸಲು ಗುಣಮಟ್ಟದ ಕಾಲುದಾರಿಗಳನ್ನು ನಿರ್ಮಿಸುವುದು ಅತ್ಯಗತ್ಯ.

ಕಾರು-ಕೇಂದ್ರಿತ ಯೋಜನೆಗಳ ಬದಲು, ಜನ-ಕೇಂದ್ರಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರೂಪಿಸುವುದೇ ಬೆಂಗಳೂರಿನ ಭವಿಷ್ಯಕ್ಕೆ ಉತ್ತಮ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಈ ಸಲಹೆಗಳಿಗೆ ಉಪಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರ ಸುರಂಗ ರಸ್ತೆ ಯೋಜನೆಯನ್ನು ಕೈಬಿಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version