ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆ ಮತ್ತೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಗರದ ಪ್ರಮುಖ ಉದ್ಯಮಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಾರಿ ಸರ್ಕಾರದ ಪ್ರತಿಕ್ರಿಯೆ ಭಿನ್ನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರುಗಳು ಉದ್ಯಮಿಗಳ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಪ್ರಖ್ಯಾತ ಉದ್ಯಮಿ ಮೋಹನ್‌ದಾಸ್ ಪೈ ಯಡಿಯೂರಪ್ಪ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆಗುಂಡಿಗಳ ಬಗ್ಗೆ ತಾವು ಟೀಕಿಸಿದ್ದಾಗ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆ ಮೂಲಕ, ಆಗಿನ ಮತ್ತು ಈಗಿನ ಸರ್ಕಾರದ ಧೋರಣೆಗಳ ನಡುವಿನ ವ್ಯತ್ಯಾಸವನ್ನು ಪರೋಕ್ಷವಾಗಿ ಎತ್ತಿ ತೋರಿಸಿದ್ದಾರೆ.
ಅಂದಿನ ಪ್ರತಿಕ್ರಿಯೆ, ಇಂದಿನ ಧೋರಣೆ: ಸತತ ಮಳೆಯಿಂದ ಬೆಂಗಳೂರಿನ ರಸ್ತೆಗಳು ಹದಗೆಟ್ಟಿದ್ದು, ಉದ್ಯಮಿಗಳಾದ ಟಿ.ವಿ. ಮೋಹನ್‌ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ನಗರದ ಮೂಲಸೌಕರ್ಯದ ಬಗ್ಗೆ ಸತತವಾಗಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, “ನೀವೇ ರಿಪೇರಿ ಮಾಡಿಕೊಳ್ಳಿ” ಎಂಬಂತಹ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಆದರೆ, ಈ ಹಿಂದೆ ಇದೇ ರೀತಿಯ ಪರಿಸ್ಥಿತಿಯಿದ್ದಾಗ ಯಡಿಯೂರಪ್ಪ ನೇತೃತ್ವದ ಸರ್ಕಾರವು ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ಪೈ ವಿವರಿಸಿದ್ದಾರೆ.
ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪೈ, “ಹಿಂದೆ ಯಡಿಯೂರಪ್ಪ ಆಡಳಿತಾವಧಿಯಲ್ಲಿ ರಸ್ತೆಗುಂಡಿಗಳ ಬಗ್ಗೆ ನಾನು ಚಿತ್ರಸಮೇತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದೆ. ಆಗ ಆ ಸರ್ಕಾರ ನನ್ನ ಟೀಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿತ್ತು” ಎಂದು ಹೇಳಿದ್ದಾರೆ.
“ಒಂದು ದಿನ ನಾನು ಕೆಲಸದಲ್ಲಿದ್ದಾಗ ಡಿಜಿಪಿಯಿಂದ ಕರೆ ಬಂತು. ಮುಖ್ಯಮಂತ್ರಿಗಳು ತಕ್ಷಣವೇ ನಿಮ್ಮನ್ನು ಭೇಟಿಯಾಗಲು ಬಯಸುತ್ತಾರೆ ಎಂದು ಡಿಜಿಪಿ ತಿಳಿಸಿದರು. ಏಕೆ ಕರೆದಿದ್ದಾರೆ ಎಂದು ಸ್ವಲ್ಪ ಆತಂಕದಿಂದಲೇ ನಿವಾಸಕ್ಕೆ ಹೋದೆ. ಅಲ್ಲಿ ಯಡಿಯೂರಪ್ಪನವರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು, ರಸ್ತೆಗುಂಡಿಗಳನ್ನು ಶೀಘ್ರವಾಗಿ ಸರಿಪಡಿಸುವುದಾಗಿ ಭರವಸೆ ನೀಡಿದರು” ಎಂದು ಪೈ ಅಂದಿನ ಘಟನೆಯನ್ನು ನೆನಪಿಸಿಕೊಂಡರು.
ರಸ್ತೆಗುಂಡಿ ಟೀಕಿಸಿದ್ದಕ್ಕೆ ಮುಖ್ಯಮಂತ್ರಿಗಳೊಂದಿಗೆ ಕಾಫಿ ಕುಡಿದು ಬಂದೆ ಮತ್ತು ನನ್ನ ಟೀಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡರು ಎಂದು ಪೈ ಹೇಳಿದರು. ಇದು ಈಗಿನ ಸರ್ಕಾರದ ವರ್ತನೆಗೆ ವ್ಯತಿರಿಕ್ತವಾಗಿದೆ ಎಂಬುದನ್ನು ಅವರ ಮಾತುಗಳು ಸೂಚಿಸುತ್ತಿದ್ದವು.
ಉದ್ಯಮ ಸ್ನೇಹಿ ವಾತಾವರಣದ ಕೊರತೆ?: ಇತ್ತೀಚೆಗೆ, ಮೋಹನ್‌ದಾಸ್ ಪೈ ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣದ ಕೊರತೆಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಬೆಂಗಳೂರಿಗೆ ಬರಬೇಕಾದ ಉದ್ಯಮಗಳು ನೆರೆಯ ರಾಜ್ಯಗಳ ಪಾಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಸಚಿವರುಗಳು ಜಾತಿಗಣತಿ ಮತ್ತು ತುಷ್ಟೀಕರಣದಂತಹ ವಿಷಯಗಳಲ್ಲಿ ತೊಡಗಿಸಿಕೊಂಡು, ಉಚಿತ ಯೋಜನೆಗಳಿಗೆ ಹಣ ಹೊಂದಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದು ಪೈ ವ್ಯಂಗ್ಯವಾಡಿದ್ದಾರೆ.
ಗೂಗಲ್‌ನಂತಹ ದೊಡ್ಡ ಪ್ರಾಜೆಕ್ಟ್ ರಾಜ್ಯದಿಂದ ಕೈತಪ್ಪಿ ಆಂಧ್ರಪ್ರದೇಶಕ್ಕೆ ಹೋಗಿದ್ದಕ್ಕೆ ಅವರು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೂ ಕಿಡಿಕಾರಿದ್ದರು. ಆಂಧ್ರಪ್ರದೇಶ ಸರ್ಕಾರ ಭಾರಿ ಸಬ್ಸಿಡಿಯನ್ನು ನೀಡಿದೆ, ಯಾವುದೇ ಸರ್ಕಾರ ಈ ಹೊರೆಯನ್ನು ಹೊರಲು ಸಾಧ್ಯವೇ ಎಂದು ಖರ್ಗೆ ಆಗ ಪ್ರಶ್ನಿಸಿದ್ದರು.
ಇದಕ್ಕೆ ಪ್ರಿಯಾಂಕ್ ಖರ್ಗೆ, ಮೋಹನ್‌ದಾಸ್ ಪೈ ಸುಮ್ಮನೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಮತ್ತು ರಾಜ್ಯಸಭಾ ಸದಸ್ಯತ್ವ ಸ್ಥಾನ ಬೇಕಾಗಿರುವುದರಿಂದ ಹೀಗೆ ಆರೋಪಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆ ಕೇವಲ ಮೂಲಸೌಕರ್ಯದ ವಿಷಯವಾಗಿ ಉಳಿದಿಲ್ಲ. ಇದು ಸರ್ಕಾರ ಮತ್ತು ಉದ್ಯಮ ವಲಯದ ನಡುವಿನ ಸಂವಹನ ಮತ್ತು ನಂಬಿಕೆಯ ಪ್ರಶ್ನೆಯಾಗಿಯೂ ಹೊರಹೊಮ್ಮಿದೆ.
ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಲು ಆಗಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದ ಕೈಗಾರಿಕೋದ್ಯಮಿ ಕಿರಣ್ ಮಜುಂದಾರ್ ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡೀ ಕೇ ಶಿವಕುಮಾರ್ ಮತ್ತು ಸಚಿವ ಪಾಟೀಲರು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಮತ್ತು ನಾಚಿಕೆಗೇಡಿನ ಸಂಗತಿ. ಇಷ್ಟೊ ಅಲ್ಲದೆ ಉಡಾಫೆ ಹೇಳಿಕೆಗಳು ಒಪ್ಪಿಸುವಲ್ಲಿ. ಕಿರೀಟದಂತಿರುವ ಬೆಂಗಳೂರಿಗೆ ಈ ಪರಿಸ್ಥಿತಿಗೆ ಕಾರಣರಾದ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಬಿಸಾಡಿ ಮನೆಗೆ ಹೋಗಬೇಕು.