Namma Metro. ಬೆಂಗಳೂರು ನಗರದಲ್ಲಿ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಈ ಮಾರ್ಗವನ್ನು 11 ಕಿ.ಮೀ.ವಿಸ್ತರಣೆಗೆ ಪ್ರಸ್ತಾವನೆ ಇದ್ದು, ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಲು ಚಿಂತನೆ ನಡೆದಿದೆ. ನಮ್ಮ ಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೂ 11 ಕಿ.ಮೀ.ವಿಸ್ತರಣೆಯಾಗಲಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ 2026ಕ್ಕೆ ಆರಂಭವಾಗುವ ಗುಲಾಬಿ ಮಾರ್ಗವನ್ನು ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ.
ಹಳದಿ ಮೆಟ್ರೋ ಆರಂಭವಾದ ಬಳಿಕ ನಗರದಲ್ಲಿ ಸಂಚಾರ ದಟ್ಟಣೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಪ್ರಯಾಣಿಕರು ಹೆಚ್ಚಾಗಿ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹಳದಿ ಮಾರ್ಗವನ್ನು ವಿಸ್ತರಿಸಿದರೇ ಸಾರ್ವಜನಿಕರಿಗೆ ಹಾಗೂ ಉದ್ಯೋಗಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ನಮ್ಮ ಮೆಟ್ರೋ ಹಳದಿ ಮಾರ್ಗ ಸದ್ಯಕ್ಕೆ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಇದೆ. ಚಂದಾಪುರದಿಂದ ಅತ್ತಿಬೆಲೆ ಗಡಿಯವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಆನೇಕಲ್ ತಾಲೂಕಿನ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕಿಸಲು ಅನುಕೂಲವಾಗಲಿದೆ.
ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ಬೃಹತ್ ಕ್ರೀಡಾಂಗಣಕ್ಕೂ ಸಂಪರ್ಕ ಸಿಗಲಿದೆ. ಅಲ್ಲದೇ ಆನೇಕಲ್ ತಾಲೂಕಿನಲ್ಲಿ 5 ಕೈಗಾರಿಕಾ ಪ್ರದೇಶಗಳಿವೆ. ಇಲ್ಲಿಗೆ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಇನ್ನು ಬನ್ನೇರುಘಟ್ಟ ಮಾರ್ಗದಲ್ಲಿ ಗೊಟ್ಟಿಗೆರೆವರೆಗೂ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದನ್ನು ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ, ಜಿಗಣಿ, ಆನೇಕಲ್‌ವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ.
8 ಮೆಟ್ರೋ ನಿಲ್ದಾಣಗಳು: ಚಂದಾಪುರ ಮಾರುಕಟ್ಟೆ, ಚಂದಾಪುರ, ರಮಣ ಮಹರ್ಷಿ ಆಶ್ರಮ, ನೆರಳೂರು, ಯಡವನಹಳ್ಳಿ, ಅತ್ತಿಬೆಲೆ, ಅತ್ತಿಬೆಲೆ ಟೋಲ್.
ಈ ಕುರಿತು ಆನೇಕಲ್ ಶಾಸಕ ಬಿ.ಶಿವಣ್ಣ ಮಾತನಾಡಿದ್ದು, “ಹಳದಿ ಮಾರ್ಗ ಅತ್ತಿಬೆಲೆವರೆಗೆ ವಿಸ್ತರಿಸಲು ಡಿಸಿಎಂ ಡಿಕೆ ಶಿವಕುಮಾರ್ ಅನುಮತಿ ನೀಡಿದ್ದು, ಈ ಪಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿದೆ. ಅಲ್ಲದೇ ಸೂರ್ಯ ನಗರದಲ್ಲಿ ನಿರ್ಮಾಣವಾಗಲಿರುವ ಬೃಹತ್ ಕ್ರೀಡಾಂಗಣಕ್ಕೂ ಸಂಪರ್ಕ ಕಲ್ಪಿಸಲಿದೆ. 7 ಹೊಸ ನಿಲ್ದಾಣ ಬರಲಿದ್ದು, ಗುಲಾಬಿ ಮಾರ್ಗವನ್ನು ಆನೇಕಲ್‌ವರೆಗೆ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ” ಎಂದು ಹೇಳಿದ್ದಾರೆ.
ಹಳದಿ ಮಾರ್ಗಕ್ಕೆ 5ನೇ ರೈಲು: ನಮ್ಮ ಮೆಟ್ರೋ ಹಳದಿ ಮಾರ್ಗವು 3 ರೈಲುಗಳೊಂದಿಗೆ ಕಾರ್ಯಾರಂಭ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಮತ್ತೊಂದು ರೈಲು ಸೇರ್ಪಡೆಗೊಂಡಿದೆ. ಸದ್ಯ 5ನೇ ರೈಲಿನ ಒಂದು ಬೋಗಿಯನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ರವಾನಿಸಿದ್ದು, ಉಳಿದ ಬೋಗಿಗಳು ಶೀಘ್ರವೇ ಬರಲಿದ್ದು, ಅಕ್ಟೋಬರ್ ಅಂತ್ಯದೊಳಗೆ 5ನೇ ರೈಲು ಮಾರ್ಗದಲ್ಲಿ ಸಂಚಾರವನ್ನು ನಡೆಸಲಿದೆ.