ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ಆಗಸ್ಟ್ 11ರಿಂದ ಆರಂಭವಾಗಿದೆ. ಆದರೆ ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈ ಓವರ್ ಇನ್ನೂ ಪೂರ್ಣಗೊಂಡಿಲ್ಲ. ಒಂದು ಕಡೆ ಮಾತ್ರ ವಾಹನ ಸಂಚಾರ ನಡೆಸುತ್ತಿದ್ದು, ನಿತ್ಯ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ, ಸಂಚಾರಕ್ಕೆ ಸವಾರರು ಪರದಾಟ ನಡೆಸುತ್ತಿದ್ದಾರೆ.
ನಮ್ಮ ಮೆಟ್ರೋದ ಹಳದಿ ಮಾರ್ಗ ಈಗಾಗಲೇ ಕಾರ್ಯಾರಂಭಗೊಂಡಿದ್ದರೂ, ಪಕ್ಕದಲ್ಲಿರುವ ಡಬಲ್ ಡೆಕ್ಕರ್ ಫ್ಲೈ ಓವರ್‌ನ ಕೆಲವು ಭಾಗಗಳು ಇನ್ನೂ ಅಪೂರ್ಣವಾಗಿದ್ದು, ನಿತ್ಯವೂ ಪ್ರಯಾಣಿಸುವವರಿಗೆ ಕಿರಿಕಿರಿ ಉಂಟಾಗುತ್ತಿದೆ. ಎಚ್‌ಎಸ್‌ಆರ್ ಲೇಔಟ್‌ನಿಂದ ರಾಗಿಗುಡ್ಡ ಮತ್ತು ಬಿಟಿಎಂ ಲೇಔಟ್‌ಗೆ ಸಂಪರ್ಕ ಕಲ್ಪಿಸುವ 1.37 ಕಿ.ಮೀ ಉದ್ದದ ಇಳಿಜಾರು ಸೇತುವೆಗಳು ಇನ್ನೂ ನಿರ್ಮಾಣ ಹಂತದಲ್ಲಿದೆ.
ಬಿಎಂಆರ್‌ಸಿಎಲ್ 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಡಬಲ್ ಡೆಕ್ಕರ್ ಫ್ಲೈ ಓವರ್ 5.12 ಕಿ.ಮೀ ಉದ್ದವಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಸಿಗ್ನಲ್-ಮುಕ್ತ ಮಾರ್ಗದ ಮೂಲಕ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ಕಾರಿಡಾರ್ ಅನ್ನು 2024ರ ಜುಲೈನಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಆದಾಗ್ಯೂ ವರ್ಷದ ನಂತರವೂ, ಅಪೂರ್ಣಗೊಂಡಿರುವ ಇಳಿಜಾರು ಸೇತುವೆಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಗಡುವು ಮುಗಿದಿದೆ: ಇಳಿಜಾರು ಸೇತುವೆಗಳು ಆರಂಭದಲ್ಲಿ ಜೂನ್ 2025ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿತ್ತು, ಆದರೆ ಬಿಎಂಆರ್‌ಸಿಎಲ್ ಆ ಗಡುವನ್ನು ತಪ್ಪಿದೆ. ಈ ಪ್ರಶ್ನೆ ಕುರಿತು ಅಧಿಕಾರಿಯೊಬ್ಬರು, ಸುಮಾರು ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ ಮತ್ತು ಉಳಿದ ಭಾಗಗಳು ಈ ವರ್ಷ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮಧ್ಯದ ವಾರದಲ್ಲಿ ಕಾರ್ಯಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಈ ಫೈಓವರ್, ಹಳದಿ ಮಾರ್ಗದ ಎಲಿವೇಟೆಡ್ ಮೆಟ್ರೋ ಕಾರಿಡಾರ್‌ಗೆ ಸುಗಮ ಪ್ರಯಾಣ ಮತ್ತು ಏಕೀಕರಣವನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ಲೂಪ್‌ಗಳು ಮತ್ತು ಇಳಿಜಾರು ಸೇತುವೆಗಳನ್ನು ಒಳಗೊಂಡಿದೆ. ಇದು ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಎಂಬ ಮೂರು ಪ್ರಮುಖ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ ಮತ್ತು ಅಂತಿಮವಾಗಿ ಒಟ್ಟು 5 ಇಳಿಜಾರು ಸೇತುವೆಗಳನ್ನು ಹೊಂದಿರುತ್ತದೆ.
ಪ್ರಸ್ತುತ, ಇಳಿಜಾರು ಸೇತುವೆ ಎ, ಬಿ ಮತ್ತು ಮತ್ತು ಸಿ ಎಂಬುದಾಗಿ ಕಾರ್ಯನಿರ್ವಹಿಸುತ್ತಿವೆ. ಇಳಿಜಾರು ಸೇತುವೆ ‘ಎ’ ರಾಗಿಗುಡ್ಡ ಮೆಟ್ರೋ ನಿಲ್ದಾಣವನ್ನು ಹೊಸೂರು ರಸ್ತೆಗೆ ಸಂಪರ್ಕಿಸುತ್ತದೆ, ‘ಬಿ’ ಇಳಿಜಾರು ಸೇತುವೆ ‘ಎ’ ಇಂದ ಎಚ್‌ಎಸ್‌ಆರ್ ಲೇಔಟ್ ಕಡೆಗೆ ಕವಲೊಡೆಯುತ್ತದೆ. ಇಳಿಜಾರು ಸೇತುವೆ ‘ಸಿ’ ಬಿಟಿಎಂ ಲೇಔಟ್‌ನಿಂದ ಹೊಸೂರು ರಸ್ತೆ ಮತ್ತು ಇಳಿಜಾರು ಸೇತುವೆ ‘ಎ’ ಮೂಲಕ ಎಚ್‌ಎಸ್‌ಆರ್ ಲೇಔಟ್‌ಗೆ ಸಂಪರ್ಕ ಕಲ್ಪಿಸುತ್ತದೆ.
ಉಳಿದಿರುವ ಇಳಿಜಾರು ಸೇತುವೆ ಡಿ, ಇಳಿಜಾರು ಸೇತುವೆ ‘ಎ’ ಮತ್ತು ಮೆಟ್ರೋ ಮಾರ್ಗದ ಮೇಲೆ ಎತ್ತರವಾಗಿದ್ದು, ಎಚ್‌ಎಸ್‌ಆರ್ ಲೇಔಟ್‌ನಿಂದ ರಾಗಿಗುಡ್ಡಕ್ಕೆ ನೇರ ಮಾರ್ಗವನ್ನು ಒದಗಿಸುತ್ತದೆ. ಇಳಿಜಾರು ಸೇತುವೆ ‘ಇ’ ಎಚ್‌ಎಸ್‌ಆರ್ ಲೇಔಟ್‌ನಿಂದ ಬಿಟಿಎಂ ಲೇಔಟ್‌ಗೆ ಇಳಿಯುತ್ತದೆ. ಈ ಎರಡೂ ಸೇತುವೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.