ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಗೊಂಡಿದೆ. 19.15 ಕಿ.ಮೀ. ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುತ್ತದೆ. ಸದ್ಯ ಈ ಮಾರ್ಗದಲ್ಲಿ 3 ರೈಲುಗಳು ಸಂಚಾರ ನಡೆಸುತ್ತಿವೆ. ಈಗ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ.
16 ನಿಲ್ದಾಣಗಳನ್ನು ಹೊಂದಿರುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 25 ನಿಮಿಷಕ್ಕೊಂದು ರೈಲು ಸಂಚಾರವನ್ನು ನಡೆಸುತ್ತಿದೆ. ರೈಲುಗಳ ಕೊರತೆ ಹಿನ್ನಲೆಯಲ್ಲಿ ಸದ್ಯ ರೈಲುಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲ.
ಈಗ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 4ನೇ ಮೆಟ್ರೋ ರೈಲಿನ ಪರೀಕ್ಷೆ ಪ್ರಾರಂಭವಾಗಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಶುಕ್ರವಾರದಿಂದ 4ನೇ ಮೆಟ್ರೋ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಮೂರು ರೈಲುಗಳಿಂದ ಹಳದಿ ಮಾರ್ಗ ಆಗಸ್ಟ್ 11ರಿಂದ ಸೇವೆ ಆರಂಭಿಸಿದ್ದು, ಇದೀಗ ಪ್ರತಿ 25 ನಿಮಿಷಗಳಿಗೆ ಒಂದು ರೈಲು ಆವರ್ತನದೊಂದಿಗೆ ಪ್ರಯಾಣಿಕರು ಸೇವೆ ಪಡೆಯುತ್ತಿದ್ದಾರೆ. ರೈಲುಗಳ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.
ಶುಕ್ರವಾರದಿಂದ ಹೊಸ 4ನೇ ರೈಲಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅದು ಪೂರ್ಣಗೊಳ್ಳುತ್ತಿದ್ದಂತೆ ಅದನ್ನು ಸೇವೆ ನಿಯೋಜಿಸಲಾಗುವುದು. ಆಗ ಹಳದಿ ಮಾರ್ಗದಲ್ಲಿ ಪ್ರತಿ 25 ನಿಮಿಷಕ್ಕೆ ಬದಲಾಗಿ 20 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಹೇಳಿದ್ದಾರೆ.
ಹಳದಿ ಮಾರ್ಗದ ವಾಣಿಜ್ಯ ಕಾರ್ಯಾಚರಣೆಯಲ್ಲಿ ಶೀಘ್ರವೇ 20 ನಿಮಿಷಕ್ಕೊಂದು ರೈಲು ಸಂಚಾರ ನಡೆಸಲಿದೆ. ಅಲ್ಲದೇ ಅಕ್ಟೋಬರ್‌ಗೆ ಮತ್ತೆ 2 ರೈಲು ನಗರಕ್ಕೆ ಆಗಮಿಸಲಿದ್ದು, ಅವುಗಳನ್ನು ಪರೀಕ್ಷೆ ಬಳಿಕ ಸಂಚಾರಕ್ಕೆ ನಿಯೋಜನೆ ಮಾಡಲಾಗುತ್ತದೆ.
ನಗರಕ್ಕೆ ಬಂದ ರೈಲನ್ನು ಹೆಬ್ಬಗೋಡಿ ಡಿಪೋದಲ್ಲಿ ಲಾರಿಯಿಂದ ಅನ್‌ಲೋಡ್ ಮಾಡಿ ಜೋಡಿಸಲಾಗುತ್ತದೆ. ಬಳಿಕ ಸ್ಥಿರ ಪರೀಕ್ಷೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅದಕ್ಕಾಗಿ ಇನ್ಸ್‌ಪೆಕ್ಷನ್ ಬೇ ಲೈನ್ (ಐಬಿಎಲ್)ಗೆ ರೈಲು ತೆಗೆದುಕೊಂಡು ಹೋಗಲಾಗುತ್ತದೆ. ಡೈನಾಮಿಕ್ ಪರೀಕ್ಷೆ, ಲೋಡ್ ಟೆಸ್ಟ್, ಸಿಗ್ನಲಿಂಗ್ ಟೆಸ್ಟ್, ಚಾಲಕ ರಹಿತ, ಚಾಲಕ ಸಹಿತ ಸೇರಿದಂತೆ ಅಗತ್ಯ ಎಲ್ಲಾ ಪರೀಕ್ಷೆಗಳನ್ನು ಮುಂದಿನ ಎರಡು ವಾರದಲ್ಲಿ ನಡೆಸಲಾಗುತ್ತದೆ.
ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದ್ದರಿಂದ ಹಗಲು ಹೊತ್ತಿನಲ್ಲಿ 4ನೇ ರೈಲಿನ ಪರೀಕ್ಷೆ ನಡೆಸಲು ಆಗುವುದಿಲ್ಲ. ಆದ್ದರಿಂದ ರಾತ್ರಿ ಮಾತ್ರ ಪ್ರಾಯೋಗಿಕ ಸಂಚಾರವನ್ನು ನಡೆಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಎರಡು ವಾರಗಳ ಕಾಲ ಈ ರೈಲಿನ ಪರೀಕ್ಷೆಗಳನ್ನು ರಾತ್ರಿ ನಡೆಸಲಾಗುತ್ತದೆ.
ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳನ್ನು ಪಶ್ಚಿಮ ಬಂಗಾಳದ ಟಿಟಾಗರ್‌ನಲ್ಲಿ ತಯಾರು ಮಾಡಲಾಗುತ್ತಿದೆ. ಈ ಕಂಪನಿ ಬೆಂಗಳೂರು ಮೆಟ್ರೋ ಮಾತ್ರವಲ್ಲ ಅಹಮದಾಬಾದ್ ಮೆಟ್ರೋ ಸೇವೆಗೆ ಸಹ ಬೋಗಿ ತಯಾರು ಮಾಡುತ್ತದೆ. ಬಿಎಂಆರ್‌ಸಿಎಲ್ ರೈಲು ಉತ್ಪಾದನೆಗೆ ಚೀನಾದ ಟಿಆರ್‌ಎಸ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿ ಟಿಟಾಗರ್ ಜೊತೆ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ಬೋಗಿ ತಯಾರು ಮಾಡುತ್ತಿದೆ.
ಒಟ್ಟು 36 ರೈಲು ಸೆಟ್‌ಗಳನ್ನು ತಯಾರು ಮಾಡಲು ಟೆಂಡರ್ ನೀಡಲಾಗಿದೆ. ಇದರಲ್ಲಿ 15 ರೈಲುಗಳು ಹಳದಿ ಮಾರ್ಗದಲ್ಲಿ ಸಂಚಾರವನ್ನು ನಡೆಲಿವೆ. ಉಳಿದ ರೈಲು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.