ಬೆಂಗಳೂರು ನಗರದಲ್ಲಿ ಸುಮಾರು 4 ವರ್ಷಗಳ ವಿಳಂಬದ ನಂತರ ಆಗಸ್ಟ್‌ನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ಸಿಕ್ಕಿದ್ದು, ಬಹು ನಿರೀಕ್ಷಿತ ಕಾರಿಡಾರ್ ಆಗಿರುವ ಗುಲಾಬಿ(ಪಿಂಕ್)ಮಾರ್ಗವು ಕೂಡ 2026 ವಾರ್ಚ್‌ನಲ್ಲಿ ಎರಡು ಹಂತಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ.
ಬಿಎಂಆರ್ ಸಿಎಲ್‌ನ ವೇಳಾಪಟ್ಟಿಯ ಪ್ರಕಾರ, ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ತಾವರೆಕೆರೆಯಿಂದ ಕಾಳೇನ ಅಗ್ರಹಾರದವರೆಗಿನ 7.5 ಕಿ.ಮೀ ಎತ್ತರದ ವಿಭಾಗವು ಕೂಡ ಮಾರ್ಚ್‌ನೊಳಗೆ ಕಾರ್ಯಾರಂಭ ಮಾಡ ಲಿದೆ. ನಗರದ ಅತಿ ಉದ್ದದ ಸುರಂಗ (ಅಂಡರ್ ಗ್ರೌಂಡ್ ಕಾರಿಡಾರ್) ಮೆಟ್ರೋ ಮಾರ್ಗವಾಗಿರುವ 13.76 ಕಿ.ಮೀ 2026ರ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.
ಸುರಂಗ (ಅಂಡರ್ ಗ್ರೌಂಡ್ ಕಾರಿಡಾರ್) ಸಂಪರ್ಕವು ಡೈರಿ ವೃತ್ತವನ್ನು ನಾಗವಾರಕ್ಕೆ ಸಂಪರ್ಕಿಸಲಿದ್ದು, ಇದು ಎಂ.ಜಿ.ರಸ್ತೆ, ಶಿವಾಜಿನಗರ ಮತ್ತು ಟ್ಯಾನರಿ ರಸ್ತೆಯ ಮೂಲಕ ಹಾದುಹೋಗುತ್ತದೆ. ಗುಲಾಬಿ ಮಾರ್ಗಕ್ಕೆ ಸಂಬಂಧಿಸಿದ ಎತ್ತರದ ಭಾಗದ ಕಾಮಗಾರಿಗಳು ಪೂರ್ಣಗೊಂಡಿದ್ದು, ಸುರಂಗದಲ್ಲಿ ನಿಲ್ದಾಣಗಳ ಕೆಲಸ ಮುಂದುವರಿದಿದೆ.
ಎರಡೂ ವಿಭಾಗ ಗಳಲ್ಲೂ ರೈಲ್ವೆ ಹಳಿ ಅಳವಡಿಕೆ ಮತ್ತು ತಾಂತ್ರಿಕ ಸಂಬಂಧಿ ಚಟುವಟಿಕೆಗಳು ನಡೆಯುತ್ತಿವೆ. ಗುಲಾಬಿ ಮೆಟ್ರೋ ಮಾರ್ಗದ ಸಾಕಷ್ಟು ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ. ಈಗಾಗಲೇ ಕೆಲ ರೈಲ್ವೆ ಹಳಿ ಸಂಬಂಧ ಸಿಗ್ನಲಿಂಗ್ ಜಾಲದ ಪ್ರಯೋಗಳು ನಡೆಯುತ್ತಿವೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸುರಕ್ಷಿತವಾಗಿ ಸಂಚರಿಸುವುದನ್ನು ಖಚಿತಪಡಿಸಿಕೊಳ್ಳಲು ಲೋಡ್ ಪರೀಕ್ಷೆಗಳನ್ನು ಸಹ ನಡೆಸುತ್ತೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಜಯದೇವ ಮತ್ತು ತಾವರೆಕೆರೆ ಮೆಟ್ರೋ ನಿಲ್ದಾಣಗಳ ನಡುವೆ ಸುರಕ್ಷತಾ ದೃಷ್ಟಿಯಿಂದ ಎತ್ತರದ ಮಾರ್ಗದಲ್ಲಿ ಈಗಾಗಲೇ ಬಿಎಂಆರ್‌ಸಿಎಲ್ ಜೂನ್‌ನಲ್ಲಿ 3ನೇ ರೈಲು ಪರೀಕ್ಷೆಯನ್ನು ನಡೆಸಿವೆ. ಈ ಮಾರ್ಗದ ನಿರ್ಣಾಯಕ ಕಾರ್ಯವಿಧಾನವು ಮೆಟ್ರೋ ರೈಲುಗಳಿಗೆ ಶಕ್ತಿ ತುಂಬುವ ಮತ್ತು ತಾಂತ್ರಿಕ ಪ್ರಯೋಗಗಳ ಸರಣಿಯ ಆರಂಭವನ್ನು ಗುರುತಿಸುವಂತಹದ್ದಾಗಿದೆ.
ಕಾಮಗಾರಿಗೆ ಕಲ್ಲಿನ ಪ್ರದೇಶ ಅಡ್ಡಿ: ಶಿವಾಜಿನಗರ ಮತ್ತು ವೆಲ್ಲರ ಜಂಕ್ಷನ್ ನಡುವಿನ 2.2 ಕಿ. ಮೀ ಮಾರ್ಗದಲ್ಲಿ ಕಾಮಗಾರಿ ವೇಳೆ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗಿತ್ತು. ಇಲ್ಲಿ ಜನನಿಬಿಡ ಪ್ರದೇಶದ ಜೊತೆಗೆ ಸುರಂಗದಲ್ಲಿ ಕಲ್ಲಿನ ಭೂಪ್ರದೇಶ ಸೇರಿಕೊಂಡಿದ್ದರಿಂದಾಗಿ ಕಾಮಗಾರಿ ಪ್ರಗತಿ ಗಣನೀಯವಾಗಿ ನಿಧಾನವಾಗಲು
ಕಾರಣವಾಯಿತು.
ಮುಖ್ಯವಾಗಿ ಈ ನಿರ್ದಿಷ್ಟ ಮಾರ್ಗವು ಸಾಕಷ್ಟು ವೇಳೆ ತನ್ನ ಗಡುವನ್ನು ಮುಂದೂಡಬೇಕಾಯಿತು. ಹಾಗಾಗಿ ಕೆಲ ಆರೋಪಗಳನ್ನು ಎದುರಿಸಬೇಕಾಯಿತು. ಆದಾಗ್ಯೂ, ಬಿಎಂಆರ್‌ಸಿಎಲ್ ಅಕ್ಟೋಬರ್ 2024ರಲ್ಲಿ ಸಂಪೂರ್ಣ (ಅಂಡರ್ ಗ್ರೌಂಡ್ ಕಾರಿಡಾರ್) ಮಾರ್ಗವನ್ನು ಪೂರ್ಣಗೊಳಿಸಲಾಗಿದೆ.