ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯ ಮತ್ತು ಶಿವಮೊಗ್ಗ ಜಿಲ್ಲೆಯ ತಳಕಳಲೆ ಜಲಾಶಯವನ್ನು ಬಳಸಿಕೊಂಡು ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಜಾರಿ ಅನಿವಾರ್ಯವೆಂದು ಬೆಂಗಳೂರಿನ ರಾಜ್ಯ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಅಭಿಯಂತರ ವಿಜಯ ತಿಳಿಸಿದ್ದಾರೆ. ಅವರು ಈ ಕುರಿತು ಹೊನ್ನಾವರದಲ್ಲಿ ಮಾಹಿತಿ ನೀಡಿ ಈ ಯೋಜನೆಗೆ 16,041 ಮರಗಳು ನಾಶವಾಗಲಿದೆ.
ಎಲ್ಲ ಇಲಾಖೆಗಳ ಒಪ್ಪಿಗೆಯ ನಂತರವೇ 2 ಸಾವಿರ ಮ್ಯೆಗಾವ್ಯಾಟ್ ಸಾಮರ್ಥ್ಯದ ಯೋಜನೆ ಜಾರಿ ಮಾಡಲು ಮುಂದಾಗಿದ್ದು, ರಾಜ್ಯದ ವಿದ್ಯುತ್ ಬೇಡಿಕೆ ಇಡೇರಿಸಲು ಯೋಜನೆ ಅನಿವಾರ್ಯವೆಂದು ತಿಳಿಸಿದರು. ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ 10,240 ಕೋಟಿ ವೆಚ್ಚವಾಗಲಿದೆ. ಈ ಯೋಜನೆ ಜಾರಿಯಿಂದ ಭೂಕುಸಿತದ ಸಾಧ್ಯತೆ ಇಲ್ಲ. ಸಾರ್ವಜನಿಕರಿಗೆ ಈ ಕುರಿತು ಆತಂಕ ಬೇಡ.
ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೆಕ್ಷಣಾ ಇಲಾಖೆ ಈ ಪ್ರದೇಶದಲ್ಲಿ ಸರ್ವೆ ಮಾಡಿ ಪರಿಶೀಲಿಸಿದ್ದು, ಯೋಜನಾ ಪ್ರದೇಶದಲ್ಲಿ ಸುರಂಗ ನಿರ್ಮಾಣ ಮತ್ತು ಕಾಮಗಾರಿಯಿಂದ ಭೂಕುಸಿತ ಸಾಧ್ಯತೆ ಇರುವುದಿಲ್ಲ ಎಂಬುದನ್ನು ದೃಢೀಕರಿಸಿದ ನಂತರ ಯೋಜನೆಗೆ ಅನುಮತಿ ನೀಡಿರುತ್ತದೆ ಎಂದು ಸ್ಪಷ್ಟಪಡಿಸಿದ ಅವರು ಯೋಜನಾ ಪ್ರದೇಶದ ಕಾಡುಗಳಲ್ಲಿರುವ ಅಪರೂಪದ ಸಿಂಗಳಿಕ (ಲಯನ್ ಟೆಲ್ಡ್ ಮೆಕಾಕ್ )ಸಂಚಾರಕ್ಕೆ ತೊಡಕಾಗದಂತೆ ಕ್ರಮ ವಹಿಸಲು ಕೆ.ಪಿ.ಸಿ. ಮುಂದಾಗಿದೆ.
ಅರಣ್ಯ ಇಲಾಖೆಯ ಮಾರ್ಗದರ್ಶನ ಹಾಗೂ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅನುಸರಿಸಲಾಗಿದ್ದ ಟ್ರೀ ಕ್ಯಾನೋಪಿ ಗಳನ್ನು ನಿರ್ಮಾಣ ಮಾಡುವ ಶರತ್ತಿನೊಂದಿಗೆ ಕೆ.ಪಿ.ಸಿ. ಈ ಯೋಜನೆಗೆ ಮುಂದಾಗಿದೆ. ಈ ಯೋಜನೆಯಲ್ಲಿ ಭೂಮಿಯ ಆಳದಲ್ಲಿ ಸುರಂಗದ ಮೂಲಕ ನೀರನ್ನು ಹರಿಬಿಡುವದರಿಂದ ಮತ್ತು ಅದೇ ಸುರಂಗದ ಮೂಲಕ ನೀರನ್ನು ಎತ್ತುವಳಿ ಮಾಡುವದರಿಂದ ಸುರಂಗ ನಿಮಾ೯ಣದ ಭೂಮಿಯ ಮೇಲ್ಮೈ ಮೇಲಿರುವ ಗಿಡ-ಮರ-ಪರಿಸರಕ್ಕೆ ಹಾನಿಯಾಗುವುದಿಲ್ಲ ಎಂದು ಸ್ಪಷ್ಠಪಡಿಸಿದ ಅವರು ಈ ಯೋಜನೆಗೆ ಕೇವಲ 100.645 ಹೆಕ್ಟರ್ (248.8 ಎಕರೆ)ಪ್ರದೇಶ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ 54.155 ಹೆಕ್ಟರ್ ಅರಣ್ಯ ಪ್ರದೇಶವಾಗಿದ್ದು, ಉಳಿದದ್ದು ಅರಣ್ಯೇತರ ಪ್ರದೇಶವಾಗಿದೆ.ಇದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲವೆಂದು ತಿಳಿಸಿದರು.