Home ನಮ್ಮ ಜಿಲ್ಲೆ ಬೆಂಗಳೂರು Bengaluru Metro ನಿಲ್ದಾಣಕ್ಕೆ ಸ್ಫೋಟದ ಬೆದರಿಕೆ: ‘ನಾನೊಬ್ಬ ಉಗ್ರ’ ಎಂದ ಅಪರಿಚಿತ

Bengaluru Metro ನಿಲ್ದಾಣಕ್ಕೆ ಸ್ಫೋಟದ ಬೆದರಿಕೆ: ‘ನಾನೊಬ್ಬ ಉಗ್ರ’ ಎಂದ ಅಪರಿಚಿತ

0

Bengaluru Metro: ನಗರದ ಲಕ್ಷಾಂತರ ಜನರ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ಗೆ ಇದೀಗ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆದರೆ, ಈ ಬೆದರಿಕೆಯ ಹಿಂದಿರುವುದು ಯಾವುದೇ ಉಗ್ರ ಸಂಘಟನೆಯಲ್ಲ, ಬದಲಾಗಿ ತನ್ನ ಮಾಜಿ ಪತ್ನಿಯ ಮೇಲಿನ ‘ಪ್ರೀತಿ’ ಮತ್ತು ಆಕ್ರೋಶ!

ನವೆಂಬರ್ 14ರ ತಡರಾತ್ರಿ ಸುಮಾರು 11:30ಕ್ಕೆ, ಬಿಎಂಆರ್‌ಸಿಎಲ್‌ನ ಅಧಿಕೃತ ಇಮೇಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಈ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ. “ಮೆಟ್ರೋ ಸಿಬ್ಬಂದಿಯಾಗಿರುವ ನನ್ನ ವಿಚ್ಛೇದಿತ ಪತ್ನಿಗೆ, ಕೆಲಸದ ನಂತರ ಮಾನಸಿಕ ಕಿರುಕುಳ ನೀಡಲಾಗುತ್ತಿದೆ.

ಇದನ್ನು ನಿಲ್ಲಿಸದಿದ್ದರೆ, ನಿಮ್ಮ ಒಂದು ಮೆಟ್ರೋ ನಿಲ್ದಾಣವನ್ನು ಸ್ಫೋಟಿಸಬೇಕಾಗುತ್ತದೆ. ನಾನು ಒಬ್ಬ ಉಗ್ರನಿದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧ,” ಎಂದು ಆತ ಇಮೇಲ್‌ನಲ್ಲಿ ಎಚ್ಚರಿಸಿದ್ದಾನೆ.

ಬೆದರಿಕೆ ಇಮೇಲ್ ಅನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಆರ್‌ಸಿಎಲ್ ಅಧಿಕಾರಿಗಳು, ತಕ್ಷಣವೇ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ಇಮೇಲ್ ಕಳುಹಿಸಿದ ವ್ಯಕ್ತಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ವೈಯಕ್ತಿಕ ಕಾರಣಕ್ಕಾಗಿ ಇಂತಹ ಗಂಭೀರ ಬೆದರಿಕೆ ಹಾಕಿರುವುದು ಇದೀಗ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ, ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಪೊಲೀಸರ ತನಿಖೆಯಿಂದಷ್ಟೇ ಈ ಇಮೇಲ್ ಹಿಂದಿನ ಸತ್ಯಾಸತ್ಯತೆ ಮತ್ತು ಆರೋಪಿಯ ಗುರುತು ಪತ್ತೆಯಾಗಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version