ಜಾತಿಗಣತಿ ಗೊಂದಲ: ರಾಹುಲ್ ಗಾಂಧಿ ನಡೆಯಂತೆ ಅಯೋಮಯ; ಅಶೋಕ್ ಲೇವಡಿ

0
21

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ ಪ್ರಕ್ರಿಯೆಯು ತೀವ್ರ ಗೊಂದಲಕ್ಕೆ ಸಿಲುಕಿದ್ದು, ವಿರೋಧ ಪಕ್ಷ ಬಿಜೆಪಿಯಿಂದ ಭಾರಿ ಟೀಕೆಗೆ ಗುರಿಯಾಗಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ “ಕಾಂಗ್ರೆಸ್‌ನ ಜಾತಿಗಣತಿ ರಾಹುಲ್ ಗಾಂಧಿ ನಡೆಗಳಂತೆ ಸ್ಪಷ್ಟ ಗುರಿ, ನಿರ್ದಿಷ್ಟ ಉದ್ದೇಶವಿಲ್ಲದೆ ಅಯೋಮಯವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ. ಸರ್ಕಾರದ ಈ ನಡೆಯು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶಾಲಾ ರಜೆ ವಿಸ್ತರಣೆ,ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲೆ?: ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಿ, ಶಿಕ್ಷಕರನ್ನು ಜಾತಿ ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

“ಗಣತಿದಾರರಿಗೆ ಏನು ಕೇಳಬೇಕೆಂಬುದೇ ಸ್ಪಷ್ಟವಿಲ್ಲದ ಗೊಂದಲಮಯ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಂಡು, ಮಕ್ಕಳನ್ನು ತರಗತಿಯಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಕೇವಲ ಕಾಂಗ್ರೆಸ್‌ನ ವಿಭಜಕ ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ನಡೆಯುತ್ತಿರುವ ಸರ್ಕಸ್” ಎಂದು ಅಶೋಕ್ ಟೀಕಿಸಿದ್ದಾರೆ.

ಈ ಸಮೀಕ್ಷೆ ದೋಷಗಳಿಂದ ಕೂಡಿದೆ ಮತ್ತು ಅಧಿಕಾರಕ್ಕೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತನೆಗೆ ಕರ್ನಾಟಕದ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಮರ್ಥನೆ ಮತ್ತು ವಿರೋಧ ಪಕ್ಷದ ಆರೋಪ: ವಾಸ್ತವವಾಗಿ, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣ, ಸರ್ಕಾರ ಈ ರಜೆ ವಿಸ್ತರಣೆ ಆದೇಶ ಹೊರಡಿಸಿದೆ.

ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಸಹಕಾರ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 7 ರಂದು ಘೋಷಿಸಿದ್ದರು. ಆದರೆ, ಬಿಜೆಪಿಯು ಸರ್ಕಾರದ ಈ ಕ್ರಮವನ್ನು “ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡುವ ನಡೆ” ಎಂದು ಬಣ್ಣಿಸಿದ್ದು, ಕಾಂಗ್ರೆಸ್ ಸರ್ಕಾರದ ಅಸಮರ್ಥ ಮತ್ತು ರಾಜಕೀಯ ಪ್ರೇರಿತ ಆಡಳಿತಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಆರೋಪಿಸಿದೆ.

Previous articleKarnataka Cabinet: ಮಂತ್ರಿಗಳಿಗೆ ರಹಸ್ಯ ಪರೀಕ್ಷೆ!
Next articleಜಿಯೋಭಾರತ್: ಅಗ್ಗದ ದರದ ಫೋನ್‍ ಬಿಡುಗಡೆ – ಬೆಲೆ ಎಷ್ಟು ಗೊತ್ತಾ?

LEAVE A REPLY

Please enter your comment!
Please enter your name here