ನಂದಿನಿ ತುಪ್ಪ ಅಂದ್ರೆ ಕನ್ನಡಿಗರಿಗೆ ಪಂಚಪ್ರಾಣ. ಅದರ ರುಚಿ, ಪರಿಮಳಕ್ಕೆ ಮನಸೋಲದವರಿಲ್ಲ. ಆದರೆ, ನೀವು ತಿನ್ನುತ್ತಿರೋ ತುಪ್ಪ ನಿಜವಾಗಲೂ ಅಸಲಿನಾ? ಇಂತಹದ್ದೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ಕಾರಣ, ಬೆಂಗಳೂರಿನಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವೊಂದು ಸಿಸಿಬಿ (CCB) ಬಲೆಗೆ ಬಿದ್ದಿದೆ.
ಬ್ರ್ಯಾಂಡೆಡ್ ತುಪ್ಪ ಎಂದು ನಂಬಿ ಜನರಿಗೆ ಮೋಸ ಮಾಡುತ್ತಿದ್ದ ದಂಪತಿ ಸೇರಿದಂತೆ ನಾಲ್ವರು ಈಗ ಜೈಲು ಪಾಲಾಗಿದ್ದಾರೆ. ಈ ದಂಧೆಯ ಕಿಂಗ್‌ಪಿನ್‌ಗಳಾದ ಶಿವಕುಮಾರ್ ಮತ್ತು ರಮ್ಯಾ ದಂಪತಿ ಮಾಡುತ್ತಿದ್ದ ಕೆಲಸ ಕೇಳಿದರೆ ಶಾಕ್ ಆಗ್ತೀರಾ.
ಇವರು ಕೆಎಂಎಫ್‌ನಿಂದಲೇ ಅಸಲಿ ನಂದಿನಿ ತುಪ್ಪವನ್ನು ಅಧಿಕೃತವಾಗಿ ಖರೀದಿಸುತ್ತಿದ್ದರು. ಬಳಿಕ ಅದನ್ನು ತಮಿಳುನಾಡಿನ ತಿರುಪೂರ್‌ಗೆ ಸಾಗಿಸುತ್ತಿದ್ದರು. ಅಲ್ಲಿನ ಗುಪ್ತ ಗೋದಾಮಿನಲ್ಲಿ 1 ಲೀಟರ್ ಅಸಲಿ ತುಪ್ಪಕ್ಕೆ ಅಗ್ಗದ ಪಾಮ್ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಸೇರಿಸಿ, ಬರೋಬ್ಬರಿ 4 ಲೀಟರ್ ನಕಲಿ ತುಪ್ಪವನ್ನು ತಯಾರಿಸುತ್ತಿದ್ದರು. ಬಳಿಕ ಅದಕ್ಕೆ ಅಸಲಿ ನಂದಿನಿ ಲೇಬಲ್ ಅಂಟಿಸಿ ಬೆಂಗಳೂರಿನ ಮಾರುಕಟ್ಟೆಗೆ ಬಿಡುತ್ತಿದ್ದರು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖದೀಮರು: ತುಪ್ಪದ ಗುಣಮಟ್ಟದಲ್ಲಿ ವ್ಯತ್ಯಾಸ ಮತ್ತು ಪೂರೈಕೆಯಲ್ಲಿನ ಅನುಮಾನ ಗಮನಿಸಿದ ಕೆಎಂಎಫ್ ಜಾಗೃತ ದಳ, ಸಿಸಿಬಿ ಪೊಲೀಸರ ಜೊತೆಗೂಡಿ ಕಾರ್ಯಾಚರಣೆ ನಡೆಸಿದೆ.
ಚಾಮರಾಜಪೇಟೆಯ ‘ಕೃಷ್ಣ ಎಂಟರ್‌ಪ್ರೈಸಸ್’ ಮೇಲೆ ದಾಳಿ ಮಾಡಿದಾಗ, ಬರೋಬ್ಬರಿ 1.26 ಕೋಟಿ ರೂಪಾಯಿ ಮೌಲ್ಯದ 8,136 ಲೀಟರ್ ಕಲಬೆರಕೆ ತುಪ್ಪ ಪತ್ತೆಯಾಗಿದೆ. ಜೊತೆಗೆ ಹೈಟೆಕ್ ಪ್ಯಾಕಿಂಗ್ ಯಂತ್ರಗಳು ಮತ್ತು ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಇತ್ತೀಚೆಗೆ ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಗ್ರಾಹಕರಲ್ಲಿ ಆತಂಕ ಹೆಚ್ಚಿಸಿದೆ. ವಶಪಡಿಸಿಕೊಂಡ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇದೆಯೇ ಎಂಬುದನ್ನು ಪತ್ತೆಹಚ್ಚಲು ಲ್ಯಾಬ್‌ಗೆ ಕಳುಹಿಸಲಾಗಿದೆ.
ಇಂತಹ ಕಲಬೆರಕೆ ತುಪ್ಪ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಲಿವರ್ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅಧಿಕೃತ ನಂದಿನಿ ಮಳಿಗೆಗಳನ್ನು ಬಿಟ್ಟು, ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕಂಡಕಂಡ ಅಂಗಡಿಗಳಲ್ಲಿ ತುಪ್ಪ ಖರೀದಿಸುವ ಮುನ್ನ ಎಚ್ಚರ ವಹಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
