ಡಿಕೆ ಶಿವಕುಮಾರ್‌ಗೆ ಬಿಜೆಪಿ ಗಾಳ: ಡಿಸಿಎಂ ಆಫರ್ ತಿರಸ್ಕರಿಸಿ ಡಿಕೆಶಿ ಜೈಲು ಆಯ್ಕೆ!

0
18

ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಬಂದಿತ್ತು. ಆದರೆ, ಪಕ್ಷ ನಿಷ್ಠೆಗಾಗಿ ಜೈಲು ಸೇರಲು ನಿರ್ಧರಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಂದರ್ಭದಲ್ಲಿ ಹತ್ತು ಮಂದಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಆಗ ಕನಕಪುರದಲ್ಲಿದ್ದ ಡಿಕೆಶಿ ಬೆಂಗಳೂರಿಗೆ ಬಂದು ಐದಾರು ಶಾಸಕರನ್ನು ಮನವೊಲಿಸಿ ವಾಪಸ್ ಕರೆತಂದಿದ್ದರು.

ಇದೇ ವೇಳೆ ಅವರಿಗೆ ಆದಾಯ ತೆರಿಗೆ ಇಲಾಖೆಯ ಆಡಿಟರ್ ಒಬ್ಬರ ದೂರವಾಣಿ ಕರೆಯ ಮೂಲಕ ಆಫರ್ ಬಂದಿತ್ತು. “ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ? ಎಲ್ಲಾ ಶಾಸಕರನ್ನು ವಾಪಸ್ ಕರೆದುಕೊಂಡು ಬನ್ನಿ” ಎಂದು ಕೇಳಲಾಗಿತ್ತು.

ಈ ಸಂದರ್ಭದಲ್ಲಿ ಡಿಕೆಶಿ, “ನನಗೆ ಇಷ್ಟೆಲ್ಲಾ ಸ್ಥಾನಮಾನಗಳನ್ನು ನೀಡಿದ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ” ಎಂದು ದಿಟ್ಟ ಉತ್ತರ ನೀಡಿದ್ದರು. ರಾಜೀವ್ ಗಾಂಧಿ ತಮಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದನ್ನು ಸ್ಮರಿಸಿದ ಡಿಕೆಶಿ, ಬಂಗಾರಪ್ಪ ಸಹಕಾರದಿಂದಲೇ ತಾನು ಈ ಮಟ್ಟಕ್ಕೆ ಬೆಳೆದಿರುವುದಾಗಿ ತಿಳಿಸಿದರು.

ಪಕ್ಷದ ಮೇಲಿನ ನಿಷ್ಠೆಯಿಂದಾಗಿಯೇ ಜೈಲು ಆಯ್ಕೆ ಮಾಡಿಕೊಂಡೆ ಎಂದು ಡಿಕೆಶಿ ಹೇಳಿಕೊಂಡರು. ಅಂದು ಬೇರೆ ಆಯ್ಕೆ ಮಾಡಿಕೊಂಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ತಮ್ಮ ರಾಜಕೀಯ ಜೀವನದ ಮಹತ್ವದ ತಿರುವನ್ನು ನೆನಪಿಸಿಕೊಂಡರು.

ತಮ್ಮ ವಿದ್ಯಾರ್ಥಿ ಜೀವನದಿಂದಲೂ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಡಿಕೆಶಿ, ಮೌಂಟ್ ಕಾರ್ಮೆಲ್ ಶಾಲಾ ಚುನಾವಣೆಯಲ್ಲಿ ಗೆದ್ದಿದ್ದರೂ, ಒತ್ತಡಗಳಿಂದಾಗಿ ಕ್ರೀಡಾ ಕಾರ್ಯದರ್ಶಿ ಸ್ಥಾನವನ್ನು ಪಡೆದಿದ್ದನ್ನು ವಿವರಿಸಿದರು. ತಮ್ಮ ಸಹಪಾಠಿ ಮಾಧವ ನಾಯಕ್ 400 ಮತಗಳಿಂದ ಗೆಲ್ಲುವುದಾಗಿ ಹೇಳಿದರೂ, ಫಲಿತಾಂಶ ಘೋಷಣೆ ವೇಳೆ ಬೇರೆ ಹುಡುಗಿಯ ಹೆಸರು ಘೋಷಿಸಿದ್ದನ್ನು ನೆನಪಿಸಿಕೊಂಡರು.

ರಾಜಕಾರಣದಲ್ಲಿ ಶೇ. 80ರಷ್ಟು ಮಂದಿ ದುಡಿಯುತ್ತಾರಾದರೂ, ಕೇವಲ ಶೇ. 20ರಷ್ಟು ಮಂದಿಗೆ ಮಾತ್ರ ಸಣ್ಣಪುಟ್ಟ ಸ್ಥಾನಮಾನಗಳು ಸಿಗುತ್ತವೆ ಎಂದು ಡಿಕೆಶಿ ಅಭಿಪ್ರಾಯಪಟ್ಟರು. 63 ವರ್ಷದ ತಮಗೆ ಇನ್ನು ಎಷ್ಟು ದಿನ ರಾಜಕಾರಣ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಹೊಸಬರು ರಾಜಕೀಯಕ್ಕೆ ಬರಬೇಕು ಎಂದರು. ಐದು ಪಾಲಿಕೆಗಳು ರಚನೆಯಾದ ಕಾರಣ ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಹೊಸ ನಾಯಕರು ಬೆಳಕಿಗೆ ಬರಲಿದ್ದಾರೆ ಎಂದು ಭವಿಷ್ಯ ನುಡಿದರು.

ಜಾತ್ಯತೀತ ತತ್ವದಲ್ಲಿ ಬೆಳೆದಿದ್ದೇನೆ ಎಂದ ಡಿಕೆಶಿ, ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ತಿಳಿದಿದೆ ಎಂದು ಹೇಳಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕರ್ತರಿಗೆ ನೋವಾಗಬಾರದು ಎಂಬ ಕಾರಣಕ್ಕೆ ತಾನು ಏನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪುಸ್ತಕ ಓದುವ ಅಭ್ಯಾಸವಿಲ್ಲದ ತಾನು ಶಾಲೆ, ಕಾಲೇಜುಗಳಲ್ಲಿ ಓದಿಲ್ಲ. ಆದರೂ ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣ ಮಾಡಿಕೊಂಡು ಬೆಳೆದಿದ್ದೇನೆ. ಅಂತಿಮ ಪದವಿ ಓದುವಾಗಲೇ ಟಿಕೆಟ್ ಪಡೆದು, ಎಂಟು ಬಾರಿ ಶಾಸಕನಾಗಿ ಇಂದು ಉಪಮುಖ್ಯಮಂತ್ರಿಯಾಗಿರುವುದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದರು.

ರಾಜೀವ್ ಗಾಂಧಿ ಅವರ “ಹಿಂಬಾಲಕರನ್ನು ಸೃಷ್ಟಿಸಬೇಡಿ, ನಾಯಕರನ್ನು ಸೃಷ್ಟಿಸಿ” ಎಂಬ ಮಾತನ್ನು ನಂಬುವ ತಾನು, ಈ ಪುಸ್ತಕ ರಾಜಕಾರಣದಲ್ಲಿ ಬೆಳೆಯಲು ಬಯಸುವವರಿಗೆ ಮಾರ್ಗದರ್ಶನ ನೀಡಬಹುದು ಎಂದರು.

Previous articleದಾಂಡೇಲಿ: ಸೂರಿಗಾಗಿ ಅನಿರ್ದಿಷ್ಠಾವಧಿ ಧರಣಿ ಉಪವಾಸ ಸತ್ಯಾಗ್ರಹ
Next articleರಾಜ್ಯ ಸರ್ಕಾರದ ‘ಎ ಖಾತಾ’ ದೋಖಾ: 15,000 ಕೋಟಿ ರೂ. ಸುಲಿಗೆ!

LEAVE A REPLY

Please enter your comment!
Please enter your name here