ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದೆ. ಅದರಲ್ಲೂ ದೀಪಾವಳಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜನರು ತಮ್ಮ ಹುಟ್ಟೂರಿಗೆ, ಹತ್ತಿರದವರಿಗೆ, ನೆಂಟರಿಷ್ಟರಿಗೆ ಭೇಟಿ ನೀಡಲು ಕಾತುರರಾಗಿರುತ್ತಾರೆ. ಇದೇ ಕಾರಣಕ್ಕೆ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಜನಜಂಗುಳಿ ಹೆಚ್ಚಿರುತ್ತದೆ.
ಪ್ರಯಾಣಿಕರ ಈ ದಟ್ಟಣೆಯನ್ನು ನಿಭಾಯಿಸಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ನೈಋತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಘೋಷಿಸಿದೆ. ರಾಜಧಾನಿ ಬೆಂಗಳೂರಿನಿಂದ ಕೇರಳದ ಕೊಲ್ಲಂಗೆ ಮತ್ತು ಕೊಲ್ಲಂನಿಂದ ಬೆಂಗಳೂರಿಗೆ ವಿಶೇಷ ರೈಲುಗಳು ಸಂಚರಿಸಲಿವೆ.
ಈ ವಿಶೇಷ ರೈಲು ಸೇವೆಗಳು ದೀಪಾವಳಿ ಹಬ್ಬದ ಪ್ರಯಾಣಿಕರಿಗೆ ವರದಾನವಾಗಲಿವೆ. ಎಸ್‌ಎಂವಿಟಿ ಬೆಂಗಳೂರು – ಕೊಲ್ಲಂ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06567) 2025ರ ಅಕ್ಟೋಬರ್ 21 ರಂದು ಮಂಗಳವಾರ ರಾತ್ರಿ 11 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ಮರುದಿನ ಅಕ್ಟೋಬರ್ 22 ರಂದು ಮಧ್ಯಾಹ್ನ 12 ಗಂಟೆ 55 ನಿಮಿಷಕ್ಕೆ ಕೊಲ್ಲಂ ತಲುಪಲಿದೆ. ಈ ರೈಲು ಕೇವಲ ಒಂದು ಬಾರಿ ಮಾತ್ರ ಸಂಚರಿಸಲಿದೆ ಎಂಬುದನ್ನು ಗಮನಿಸಬೇಕು.
ಇನ್ನು ಕೊಲ್ಲಂನಿಂದ ಬೆಂಗಳೂರು ಕ್ಯಾಂಟೋನ್ಮೆಂಟ್‌ಗೆ ಕೊಲ್ಲಂ – ಬೆಂಗಳೂರು ಕ್ಯಾಂಟೋನ್ಮೆಂಟ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು (ಸಂಖ್ಯೆ 06568) 2025ರ ಅಕ್ಟೋಬರ್ 22ರಂದು ಬುಧವಾರ ಸಂಜೆ 5 ಗಂಟೆಗೆ ಕೊಲ್ಲಂ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ಮರುದಿನ, ಅಕ್ಟೋಬರ್ 23ರಂದು ಬೆಳಗ್ಗೆ 9 ಗಂಟೆ 45 ನಿಮಿಷಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣಕ್ಕೆ ಬಂದು ತಲುಪಲಿದೆ.
ಈ ವಿಶೇಷ ರೈಲುಗಳು ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ಎಸ್‌ಎಂವಿಟಿ ಬೆಂಗಳೂರು – ಕೊಲ್ಲಂ ರೈಲು (ಸಂಖ್ಯೆ 06567) ಕೆ.ಆರ್. ಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊಡನೂರ್, ಪಾಳಕ್ಕಾಡ್, ತ್ರಿಶೂರ್, ಅಲುವಾ, ಏರ್ನಾಕುಲಂ ಟೌನ್, ಕೋಟಾಯಂ, ಚಂಗಾನಸೇರಿ, ತಿರುವಲ್ಲ, ಚೆಂಗಣ್ಣೂರು, ಮಾವೆಲಿಕ್ಕರ, ಮತ್ತು ಕಯಂಕುಳಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲುಗಳು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ತಮಿಳುನಾಡು ಮತ್ತು ಕೇರಳದ ನಡುವೆ ಪ್ರಯಾಣಿಸುವ ಜನರಿಗೆ ಹೆಚ್ಚು ಅನುಕೂಲ ಒದಗಿಸಲಿವೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಎಲ್ಲಾ ವಿಧದ ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 2 ಎಸಿ ಟೂ ಟೈರ್ ಬೋಗಿಗಳು, 3 ಎಸಿ ತ್ರಿ ಟೈಯರ್ ಬೋಗಿಗಳು, 11 ಸ್ಲೀಪರ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ವರ್ಗ ಬೋಗಿಗಳು ಮತ್ತು 2 ದಿವ್ಯಾಂಗ ಸ್ನೇಹಿ ಬೋಗಿಗಳು ಇರಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ನೀವು ರೈಲಿನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಉತ್ತಮ. ವಿಶೇಷ ರೈಲುಗಳ ಟಿಕೆಟ್‌ಗಳ ಬೇಡಿಕೆ ಹೆಚ್ಚಾಗಿರುವುದರಿಂದ, ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಇದು ಸಹಾಯಕವಾಗುತ್ತದೆ.