ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿದ್ದ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಮತ್ತು ಕರವೇ ನಾರಾಯಣಗೌಡ ಸೇರಿದಂತೆ ಅನೇಕರು ಭೈರಪ್ಪ ಅಂತಿಮ ದರ್ಶನ ಪಡೆದರು. ಹಿರಿಯ ಸಾಹಿತಿ, ಎಸ್.ಎಲ್ ಬೈರಪ್ಪ 94ನೇ ವಯಸ್ಸಿನಲ್ಲಿ ಬುಧವಾರ ನಿಧನರಾಗಿದ್ದು. ಅಂತ್ಯಕ್ರಿಯೆಯನ್ನು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಬೆಳಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೈರಪ್ಪ ಗೌರವಾರ್ಥ ಮೈಸೂರಿನಲ್ಲಿ ಭವ್ಯ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದರು. “ಬಿಜೆಪಿಯವರು ಹೇಳಿದ್ರು ಎಂದು ನಾವು ಸ್ಮಾರಕ ಮಾಡುವುದಿಲ್ಲ. ಭೈರಪ್ಪ ತಮ್ಮ ಜೀವನದ ಬಹುಪಾಲು ಸಮಯವನ್ನು ಮೈಸೂರಿನಲ್ಲೇ ಕಳೆದಿದ್ದರಿಂದ, ಅಲ್ಲೇ ಸ್ಮಾರಕ ನಿರ್ಮಿಸುವುದು ಸೂಕ್ತ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಭೈರಪ್ಪನವರ ಬರಹ ಮತ್ತು ಬದುಕು ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂಬುದನ್ನು ಉಲ್ಲೇಖಿಸಿದರು.
ಸಿದ್ದರಾಮಯ್ಯ ಭೈರಪ್ಪನವರ ಸಾಹಿತ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಒಂದು ಪುಟ್ಟ ಹಳ್ಳಿಯಿಂದ ಬಂದು, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು ಭೈರಪ್ಪ. ಬೋಧನೆ ಮಾಡುತ್ತಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು, ಎರಡು ಕ್ಷೇತ್ರಗಳಲ್ಲಿ ಯಶಸ್ಸು ಕಂಡವರು. ಭೈರಪ್ಪರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಭೈರಪ್ಪನವರ ಸುಮಾರು 25 ಕಾದಂಬರಿಗಳು 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವುದು ವಿಶ್ವಮಾನ್ಯತೆಗೆ ಸಾಕ್ಷಿ. “ಇಷ್ಟು ದೊಡ್ಡ ಸಂಖ್ಯೆಯ ಭಾಷೆಗಳಿಗೆ ಕಾದಂಬರಿಗಳು ಅನುವಾದಗೊಂಡಿದ್ದು ಬಹುಶಃ ಅವರೊಬ್ಬರದ್ದೇ” ಎಂದು ಸಿಎಂ ಪ್ರಶಂಸಿಸಿದರು. ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. “ನನ್ನ ಪ್ರಕಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು. ಆದರೆ ಯಾವ ಪ್ರಶಸ್ತಿಗೂ ಆಸೆಪಟ್ಟವರಲ್ಲ. ‘ಕಾದಂಬರಿ ಬರೆಯುವುದು ನನ್ನ ಆತ್ಮತೃಪ್ತಿಗೆ’ ಎಂದು ಹೇಳುತ್ತಿದ್ದರು” ಎಂದು ಸಿದ್ದರಾಮಯ್ಯ ಭೈರಪ್ಪನವರ ಸರಳ ವ್ಯಕ್ತಿತ್ವವನ್ನು ಸ್ಮರಿಸಿದರು.
“ಜಗತ್ಪ್ರಸಿದ್ಧ ಕಾದಂಬರಿಗಳನ್ನು ಬರೆದಿದ್ದಾರೆ. ನನಗೆ ಅವರ ಎಲ್ಲಾ ಕಾದಂಬರಿಗಳನ್ನು ಓದಲು ಸಾಧ್ಯವಾಗಿಲ್ಲ. ಕೆಲವು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ” ಎಂದು ಸಿದ್ದರಾಮಯ್ಯ ಹೇಳಿದರು. ಭೈರಪ್ಪ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಭೈರಪ್ಪನವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವುದರೊಂದಿಗೆ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು. ಭೈರಪ್ಪನವರ ಭೌತಿಕ ಶರೀರ ಅಗಲಿದ್ದರೂ, ಅವರ ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯಲಿವೆ.