ಬೆಂಗಳೂರು ನಗರದ ಬಹುಪಾಲು ಐಟಿ ಕಂಪನಿಗಳು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಉದ್ಯೋಗಿಗಳಿಗೆ ನೀಡಲಾಗಿದ್ದ ವರ್ಕ್ ಪ್ರಮ್ ಹೋಮ್ ಸೌಲಭ್ಯವನ್ನು ಹಿಂಪಡೆಯಲು ನಿರ್ಧರಿಸಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಶೇಕಡಾ 80ರಷ್ಟು ಐಟಿ ಕಂಪನಿಗಳು ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿವೆ. ಈ ಕಾರಣದಿಂದಾಗಿ, ಬೆಂಗಳೂರಿನ ಔಟರ್ ರಿಂಗ್ ರೋಡ್ ಒಂದರಲ್ಲಿಯೇ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಪ್ರತಿದಿನ ಓಡಾಡುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಆರಂಭಿಸಿದ್ದವು. ಕೋವಿಡ್ ನಂತರವೂ ಈ ಪದ್ಧತಿ ಮುಂದುವರಿದಿತ್ತು. ಕೆಲವು ಕಂಪನಿಗಳು ವಾರಕ್ಕೆ ಮೂರು ದಿನ ಕಚೇರಿಗೆ ಮತ್ತು ಉಳಿದ ಮೂರು ದಿನ ಮನೆಯಿಂದಲೇ ಕೆಲಸ ಮಾಡುವ ಅವಕಾಶನೀಡಿದ್ದವು.
ಇನ್ನೂ ಕೆಲವು ಕಡೆ ವಾರಕ್ಕೆ ಕೇವಲ ಎರಡು ದಿನ ಕಚೇರಿಗೆ ಹೋಗಿ, ನಾಲ್ಕು ದಿನ ಮನೆಯಿಂದಲೇ ಕೆಲಸ ಮಾಡಬಹುದಾಗಿತ್ತು. ಆದರೆ, ಇದೀಗ ಬಹುತೇಕ ಐಟಿ ಕಂಪನಿಗಳು ಈ ಸೌಲಭ್ಯವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು ತೀರ್ಮಾನಿಸಿವೆ. ಔಟರ್ ರಿಂಗ್ ರೋಡ್‌ನಲ್ಲಿ ಸುಮಾರು 500 ಪ್ರತಿಷ್ಠಿತ ಖಾಸಗಿ ಕಂಪನಿಗಳ 2000ಕ್ಕೂ ಹೆಚ್ಚು ಕಚೇರಿಗಳಿವೆ.
ಇವುಗಳಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಿದ್ದವು. ಇದೀಗ ಉದ್ಯೋಗಿಗಳು ಕಡ್ಡಾಯವಾಗಿ ಮತ್ತೆ ಕಚೇರಿಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಚೇರಿಗೆ ಹಿಂತಿರುಗುವ ಉದ್ಯೋಗಿಗಳ ಸಂಖ್ಯೆಯಲ್ಲಿನ ಈ ಭಾರೀ ಹೆಚ್ಚಳದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟ್ರಾಫಿಕ್ ಕಿರಿಕಿರಿ ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
ಒಂದೆಡೆ ಟ್ರಾಫಿಕ್ ಕಿರಿಕಿರಿಯಿಂದ ನಮಗೆ ಸರಿಯಾದ ಸಮಯಕ್ಕೆ ಶಾಲೆ ತಲುಪಲು ಆಗುತ್ತಿಲ್ಲ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದರು. ಮತ್ತೊಂದೆಡೆ ಇತ್ತೀಚೆಗೆ ಟೆಕ್ಕಿಯೊಬ್ಬರು ವರ್ಷದಲ್ಲಿ 2.5 ತಿಂಗಳು ಬೆಂಗಳೂರು ಟ್ರಾಫಿಕ್‌ನಲ್ಲೇ ಕಳೆದುಹೋಗುತ್ತದೆ ಎಂದು ಬೇಸರದ ಪೋಸ್ಟ್ ಹಾಕಿದ್ದು ಅದು ಎಲ್ಲೆಡೆ ವೈರಲ್ ಆಗಿತ್ತು.
ಆದರೆ ಈಗ ಖಾಸಗಿ ಕಂಪನಿಗಳು ವರ್ಕ್ ಪ್ರಂ ಹೋಮ್ ಹಿಂಪಡೆಯಲು ನಿರ್ಧಾರ ಮಾಡಿದ್ದಾರೆ. ಖಾಸಗಿ ಕಂಪನಿಗಳ ಈ ನಿರ್ಧಾರಕ್ಕೆ ಗ್ರೇಟರ್ ಬೆಂಗಳೂರು ಐಟಿ ಕಂಪನೀಸ್ ಆಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಉದ್ಯೋಗಿಗಳಿಗೆ ನೀಡಲಾಗಿರುವ ವರ್ಕ್ ಪ್ರಮ್ ಹೋಮ್ ಸೌಲಭ್ಯ ಹಿಂಪಡೆಯದಂತೆ ಆಗ್ರಹಿಸಿದೆ.