ಫರೀದಾಬಾದ್: ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಅಲ್ ಫಲಾಹ್ ವಿವಿ ಉಗ್ರ ವೈದ್ಯ ಮುಜಮೀಲ್ ಶಕೀಲ್ ಗನಿ ಸ್ಫೋಟಕಗಳಿಗೆ ಕೆಮಿಕಲ್ಸ್ ತಯಾರಿಸಲು ಫ್ಲೂರ್ ಮಿಲ್ ಉಪಯೋಗಿಸುತ್ತಿದ್ದ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪುಲ್ವಾಮಾ ನಿವಾಸಿಯಾಗಿರುವ ಮುಜಮೀಲ್ ದೆಹಲಿ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಫರೀದಾಬಾದ್‌ನಲ್ಲಿರುವ ಆತನ ಬಾಡಿಗೆ ಮನೆಯಿಂದ ಪೊಲೀಸರು 350 ಕೇಜಿ ಸ್ಫೋಟಕ ವಶಪಡಿಸಿಕೊಂಡಿದ್ದರು. ಇದೀಗ ಅದೇ ನಿವಾಸದಿಂದಲೇ ಬಾಂಬ್ ತಯಾರಿಸಲು ಮುಜಮೀಲ್ ಬಳಸುತ್ತಿದ್ದ ಯಂತ್ರವನ್ನು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಆರೋಪಿ ಹೇಳಿಕೆ ಆಧಾರದ ಮೇಲೆ ಫರೀದಾಬಾದ್ ಮೂಲದ ಟ್ಯಾಕ್ಸಿ ಡ್ರೈವರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎನ್‌ಐಎ ವಶದಲ್ಲಿರುವ ಮುಜಮೀಲ್ ವಿಚಾರಣೆ ವೇಳೆ, ತಾನು ಯುರಿಯಾದಿಂದ ಅಮೂನಿಯಂ ನೈಟ್ರೆಟ್ ಬೇರ್ಪಡಿಸಲು ಫ್ಲೋರ್ ಮಿಲ್ ಯಂತ್ರ ಬಳಸುತ್ತಿದ್ದೆ ಎಂಬ ವಿಚಾರ ಬಾಯ್ಬಿಟ್ಟಿದ್ದಾನೆ.
