Home ನಮ್ಮ ಜಿಲ್ಲೆ ಬೆಂಗಳೂರು ತಿಮ್ಮಕ್ಕನ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ: ಸಿಎಂ

ತಿಮ್ಮಕ್ಕನ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ: ಸಿಎಂ

0

ಪರಿಸರ ಸಂರಕ್ಷಣೆ ಮಾಡುವ ಐವರು ಸಾಧಕರಿಗೆ ಪ್ರತಿವರ್ಷ ಸಾಲು ಮರದ ತಿಮ್ಮಕ್ಕನ ಹೆಸರಿನ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಮಾಲಿನ್ಯ ನಿಯಂತ್ರಣ ಮಂಡಳಿ,

ಸುವರ್ಣಮಹೋತ್ಸವ ಸಮಾರಂಭದಲ್ಲಿ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅವರು ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರತಿವರ್ಷ ಪರಿಸರ ಸಂರಕ್ಷಣೆ ಮಾಡುವ ಸಾಧಕರಿಗೆ ಪ್ರಶಸ್ತಿ ನೀಡಬೇಕೆಂಬ ಮನವಿಗೆ ಈ ಪ್ರಶಸ್ತಿ ನೀಡುವಂತೆ ಘೋಷಣೆ ಮಾಡಿದರು.

ಪರಿಸರ ಸಂರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ ಮೇಲಿಲ್ಲ. ಸಾರ್ವಜನಿಕರು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಕೇಂದ್ರದ ವರದಿಯ ಪ್ರಕಾರ ದೇಶದ ಹಲವು ನಗರಗಳು ಮಾಲಿನ್ಯದಿಂದ ಕೂಡಿವೆ. ಈ ಪಟ್ಟಿಯಲ್ಲಿ ಬೆಂಗಳೂರು, ದಾವಣಗೆರೆ, ಕಲ್ಬುರ್ಗಿ ನಗರವೂ ಸೇರಿರುವುದು ಆತಂಕಕಾರಿ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಒಂದರಲ್ಲೇ 900 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಇದನ್ನು ಜನ ಅರ್ಥಮಾಡಿಕೊಳ್ಳದೇ ಹೋದರೆ ಪ್ಲಾಸ್ಟಿಕ್ ಮುಕ್ತ ನಗರವಾಗಲು ಸಾಧ್ಯವಿಲ್ಲ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ 2030ರ ಹೊತ್ತಿಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಸಾಧ್ಯ ಎಂದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ನಾವು ಒಂದು ದಿನ ಇತಿಹಾಸದ ಪುಟ ಸೇರುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರ, ನೀರು, ಗಾಳಿ ಮತ್ತು ಬೆಳಕು ಇಲ್ಲೇ ಉಳಿಯುತ್ತವೆ. ಹಾಗಾಗಿ ಅವುಗಳನ್ನು ರಕ್ಷಿಸಬೇಕು. ಇಂದು ಕುಡಿಯುವ ನೀರಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಹಿಂದೆ ನಾವೆಲ್ಲಾ ಹೊಳೆ, ಬಾವಿಗಳಿಂದ ನೇರವಾಗಿ ನೀರು ಕುಡಿಯುತ್ತಿದ್ದೆವು.

ಆದರೆ ಈಗ ಒಂದು ಬಾಟಲ್ ನೀರಿಗಾಗಿ ಮೂವತ್ತರಿಂದ ನಲವತ್ತು ರೂಪಾಯಿ ತೆರಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ನೀರಿನ ಪರಿಶುದ್ಧತೆ ಇಲ್ಲದಿರುವುದು. ನಾವು ನಮ್ಮ ಧರ್ಮದಲ್ಲಿ ಅರಳಿ ಮರ, ಬೇವಿನ ಮರ, ಬನ್ನಿ ಮರಕ್ಕೆ ಪೂಜೆ ಮಾಡುತ್ತೇವೆ. ಪ್ರಾಣಿಗಳನ್ನು
ದೇವರ ವಾಹನಗಳೆಂದು ಪರಿಗಣಿಸಿದ್ದೇವೆ. ಇವುಗಳನ್ನು ನಾವು ಕಾಪಾಡಿಕೊಳ್ಳಬೇಕೆಂದರು.

ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಕೆಲಸ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದಲ್ಲಿ ಐವರಿಗೆ ಮತ್ತು ಜಿಲ್ಲಾ ಮಟ್ಟದಲ್ಲಿ ಐವರಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಅಲ್ಲದೇ ಪರಿಸರ ಮಾಲಿನ್ಯ ನಿಯಂತ್ರಣದ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ವಿಜೆತರಿಗೆ ಬಹುಮಾನ ನೀಡಲಾಯಿತು.

ಸಚಿವರಾದ ದಿನೇಶ್ ಗುಂಡೂರಾವ್, ಸುರೇಶ್ ಬಿ.ಎಸ್. ಎನ್ ಚಲುವರಾಯಸ್ವಾಮಿ, ಡಾ. ಎಂ.ಸಿ ಸುಧಾಕರ್, ನಸೀರ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈಶ್ವರ ಖಂಡ್ರೆ,ಅರಣ್ಯ ಸಚಿವ: ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮದ ಹಿನ್ನೆಲೆ ಈ ವರ್ಷ ಬೆಂಗಳೂರಿನ 50 ವಾರ್ಡ್‌ಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಪಣತೊಡಬೇಕು. ಇದಕ್ಕೆ ನಾಗರಿಕರು ಸಹಕರಿಸಬೇಕು. ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ ಪ್ಲಾಸ್ಟಿಕ್ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ರಾಜ್ಯದ ಜನತೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತ್ಯಜಿಸಬೇಕು, ಬಟ್ಟೆ ಕೈಚೀಲಗಳನ್ನು ಬಳಸಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ದತ್ತಿ ನಿಧಿಯನ್ನು ಸ್ಥಾಪಿಸಿ ಠೇವಣಿ ಇರುವ ಹಣದ ಬಡ್ಡಿಯಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಹಾಗೂ ಪ್ರತಿ ವರ್ಷ ಕನಿಷ್ಠ ಐದು ಪರಿಸರವಾದಿಗಳಿಗೆ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡಲಾಗುವುದು.

NO COMMENTS

LEAVE A REPLY

Please enter your comment!
Please enter your name here

Exit mobile version