Home ನಮ್ಮ ಜಿಲ್ಲೆ ಬೆಂಗಳೂರಿಗೆ ಬರಲಿದೆ ಮತ್ತೊಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರ

ಬೆಂಗಳೂರಿಗೆ ಬರಲಿದೆ ಮತ್ತೊಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ವಿವಿಧ ದೇಶಗಳ ರಾಯಭಾರ ಕಛೇರಿಗಳು ಆರಂಭವಾಗುತ್ತಿದೆ. ನಗರದಿಂದ 600ಕ್ಕೂ ಹೆಚ್ಚಿನ ವಿಮಾನಗಳು ಹಾರಾಟವನ್ನು ನಡೆಸುತ್ತವೆ. ಪಾಸ್‌ಪೋರ್ಟ್‌ ಕಛೇರಿಗಳ ಮೇಲೆಯೂ ಒತ್ತಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನಗರದಲ್ಲಿ ಮತ್ತೊಂದು ಪಾಸ್‌ಪೋರ್ಟ್‌ ಕೇಂದ್ರ ಆರಂಭಗೊಳ್ಳುವ ಸುಳಿವು ಸಿಕ್ಕಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ, ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದಲ್ಲಿ 3ನೇ ಪಾಸ್‌ಪೋರ್ಟ್ ಸೇವಾ ಕೇಂದ್ರ ಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಈ ಕುರಿತು ಕೇಂದ್ರ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್‌ಗೆ ಪತ್ರವನ್ನು ಬರೆದಿದ್ದಾರೆ. ವಾಯುವ್ಯ ಬೆಂಗಳೂರು ಭಾಗಕ್ಕೆ ನಗರದ 3ನೇ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಮನವಿಯನ್ನು ಸಲ್ಲಿಸಿದ್ದಾರೆ.

ಸದ್ಯ ಮಾರತ್‌ಹಳ್ಳಿ, ಲಾಲ್‌ಬಾಗ್‌ನಲ್ಲಿರುವ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದೆ. ವಾರಗಳ ಕಾಲ ಜನರು ಪಾಸ್‌ಪೋರ್ಟ‌ಗಾಗಿ ಕಾಯಬೇಕಿದೆ. ಇದರಿಂದಾಗಿ ಉತ್ತರ ಬೆಂಗಳೂರು ಭಾಗದ ಜನರಿಗೆ ಅನಾನುಕೂಲವಾಗಿದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.

ಹೊಸ ಪಾಸ್‌ಪೋರ್ಟ್‌ ಅರ್ಜಿಗಳು, ನವೀಕರಣ, ತಿದ್ದುಪಡಿ ಎಂದು ಸಾವಿರಾರು ಅರ್ಜಿಗಳು ಬರುತ್ತದೆ. ಆದ್ದರಿಂದ ಜನರು ಕಾಯಬೇಕಿದೆ. ಇದಕ್ಕಾಗಿ ನಗರಕ್ಕೆ 3ನೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಅಗತ್ಯವಿದೆ ಎಂದು ಸಂಸದರು ಬೇಡಿಕೆ ಇಟ್ಟಿದ್ದಾರೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ವಿತರಣೆ ಮಾಡುವುದರಲ್ಲಿ ಬೆಂಗಳೂರು, ಮಂಗಳೂರು ಪ್ರಮುಖ ಸ್ಥಾನದಲ್ಲಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಹೊಸ ಪಾಸ್‌ಪೋರ್ಟ್‌, ನವೀಕರಣ, ತಿದ್ದುಪಡಿ ಎಂದು ಸಾವಿರಾರು ಅರ್ಜಿಗಳನ್ನು ಸಲ್ಲಿಕೆಯಾಗುತ್ತದೆ.

ಕೇಂದ್ರ ಸರ್ಕಾರ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸಲಾಗುತ್ತದೆ ಎಂದು ಈ ಹಿಂದೆ ಘೋಷಣೆ ಮಾಡಿತ್ತು. ಆದರೆ ಮಹಾನಗರದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂಖ್ಯೆ ಅಧಿಕವಾಗಿದ್ದು, ಎರಡು ಮೂರು ಕೇಂದ್ರಗಳ ಅಗತ್ಯವಿದೆ.

ಅಂಚೆ ಕಛೇರಿಗಳಲ್ಲಿಯೂ ಪಾಸ್‌ಪೋರ್ಟ್‌ ಪಡೆಯುವ ಸೌಲಭ್ಯವನ್ನು ಹಲವು ಜಿಲ್ಲೆಗಳಲ್ಲಿ ಕಲ್ಪಿಸಲಾಗಿದೆ. ಆದರೆ ಬೆಂಗಳೂರು ನಗರದಲ್ಲಿ ಉದ್ಯೋಗ, ಪ್ರವಾಸ ಸೇರಿದಂತೆ ವಿವಿಧ ಕಾರಣಕ್ಕೆ ವಿದೇಶ ಪ್ರವಾಸ ಕೈಗೊಳ್ಳುವ ಜನರ ಸಂಖ್ಯೆ ಹೆಚ್ಚಾಗಿದ್ದು, ಪಾಸ್‌ಪೋರ್ಟ್‌ಗೆ ಬೇಡಿಕೆಯೂ ಹೆಚ್ಚಿದೆ.

Exit mobile version