ಬೆಳಗಾವಿ: ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅಪಾರ ಹಾನಿಯಾಗಿದೆ.
ಕೊಯ್ನಾ ಜಲಾಶಯದಿಂದ ಶನಿವಾರ ರಾತ್ರಿಯಿಂದ 27,900 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ಏರಿಕೆಯಾಗಿ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ ಮುಳುಗಿ ಸಂಚಾರ ಸ್ಥಗಿತಗೊಂಡಿದೆ.
ವೇದಗಂಗಾ ನದಿಯ, ಜತ್ರಾಟ-ಭಿವಸಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಶಿವಾಪುರವಾಡಿ ಮತ್ತು ಬಾರವಾಡ-ಕುನ್ನುರ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಬ್ಯಾರೇಜಗಳು ಮುಳುಗೆಡಯಾಗದಿರುವಿದರಿಂದ ಸಂಚಾರ ಎಂದಿನಂತೆ ಪ್ರಾರಂಭವಿದೆ. ಸುಳಕುಡ ಮತ್ತು ರಾಜಾಪುರ ಜಲಾಶಯದಿಂದ ಒಟ್ಟು 62,500 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ: ಮಹಾರಾಷ್ಟ್ರದಿಂದ ಸೀನಾ, ಕೊಳೆಗಾವ್, ಭೀಮಾ ಬೋರಿ ನದಿಗಳ ನೀರು ಅಪಾರ ಪ್ರಮಾಣದಲ್ಲಿ ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ ವಿಜಯಪುರ ಗಡಿಭಾಗದ 377 ಶಾಲೆಗಳು ಜಲಾವೃತಗೊಂಡಿವೆ.
ಗಡಿಭಾಗದ ಅಕ್ಕಲಕೋಟ 71, ಬಾರ್ಶಿ 10, ಕರಮಳಾ 50, ಮಾಢಾ 25, ಸಾಂಗೋಲಾ 69, ಮೊಹೋಳ 68, ಮಾಳಸಿರಸ 55, ಮಂಗಳವೇಡ 5, ಪಂಢರಪುರ 36, ಉತ್ತರ ಸೋಲಾಪುರ 7, ದಕ್ಷಿಣ ಸೋಲಾಪುರ 35 ಸೇರಿ ಒಟ್ಟು 431 ಶಾಲೆಗಳು ಮುಳುಗಿವೆ.
ಪ್ರವಾಹದಿಂದ ಶಾಲೆಗಳಲ್ಲಿ ಎಷ್ಟು ನಷ್ಟವಾಗಿದೆ ಈ ಕುರಿತು ವಿವರವಾದ ಮಾಹಿತಿ ನೀಡಲು ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ. ಮಾಹಿತಿ ಬಂದ ನಂತರ ನಷ್ಟದ ಪ್ರಮಾಣ ತಿಳಿಯಲಿದೆ ಎಂದು ಪ್ರಾಥಮಿಕ ಶಿಕ್ಷಣಾಧಿಕಾರಿ ಖಾದರ್ ಶೇಖ ತಿಳಿಸಿದ್ದಾರೆ.
ಶಾಲೆಗಳ ವರ್ಗ ಕೋಣೆಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಕೆಲವು ಶಾಲೆಗಳಿಗೆ ಪ್ರಾಥಮಿಕ ಶಿಕ್ಷಣಾಧಿಕಾರಿ ಖಾದರ ಶೇಖ ಭೇಟಿ ನೀಡಿ ಶಾಲೆಗಳ ಪರಿಶೀಲನೆ ನಡೆಸಿದ್ದಾರೆ. ಕೆಲವು ಶಾಲೆಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.