ಚಿಕ್ಕೋಡಿ: ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ 9 ದಿನಗಳಿಂದ ನಡೆಸುತ್ತಿರುವ ರೈತರ ಹೋರಾಟ ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿದೆ. ರೈತರು ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ನಡೆಸುತ್ತಿರುವ ಹೋರಾಟ ಇದೀಗ ಹಿಂಸಾಚಾರ ರೂಪು ತಾಳಿದೆ.
ಬೆಳಿಗ್ಗೆ 10 ಗಂಟೆಯಿಂದ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಾ ಇದ್ದರು. ಕಳೆದ 3 ಗಂಟೆಗಳ ಕಾಲ ಹೋರಾಟ ಮಾಡುತ್ತಿದ್ದರು. ಆದರೆ ಇದೀಗ ಕೆಲವು ಕೀಡಿಗೇಡಿಗಳು ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ. ಪೊಲೀಸರು ಇನ್ನು ಬಂದ್ ಸಾಕು ಎಂದು ರೈತರ ಮನವೊಲಿಸಲು ಮುಂದಾದರು. ಹೆದ್ದಾರಿಯಿಂದ ರೈತರನ್ನು ಪೊಲೀಸರು ಎಬ್ಬಿಸಲು ಮುಂದಾದರು. ಆದರೆ ಪೊಲೀಸರು ಅವರನ್ನು ವಶಕ್ಕೆ ಪಡೆಯುತ್ತಿರುವಾಗ ಕೆಲವು ಕೀಡಿಗೇಡಿಗಳು ಪೊಲೀಸರು ಹಾಗೂ ಮಾಧ್ಯಮದವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದಾಗಿ ಪೊಲೀಸರು ಹಾಗೂ ಮಾಧ್ಯಮದವರು ಗಾಯಗೊಂಡಿದ್ದಾರೆ. ಕಲ್ಲು ತೂರಾಟ ಮಾಡಿದ ನಂತರ ರೈತರ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಯಿತು.
“ಕಳೆದ 9 ದಿನಗಳಿಂದ ರೈತರು ಗುರ್ಲಾಪುರ ಕ್ರಾಸ್ ಬಳಿ ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ಈ ಹೋರಾಟ ಮಾಡಲಾಗಿದೆ ರೈತರು ಕಲ್ಲು ತೂರಾಟ ಮಾಡಿಲ್ಲ. ನಮ್ಮ ರೈತ ಸಂಘಟನೆಯವರು ಯಾವುದೆ ಕಾನೂನು ಕೈಗೆ ತೆಗೆದುಕೊಂಡಿಲ್ಲ. ಕೆಲವು ಕೀಡಿಗೇಡಿಗಳಿಂದ ರೈತರ ಹೋರಾಟ ಹತ್ತಿಕ್ಕುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ರಾಜಕಾರಣ ನಡೆಯುತ್ತಿದೆ. ಅದಕ್ಕಾಗಿ ಕಲ್ಲು ತೂರಾಟ ಮಾಡಿದವರನ್ನು ಬಂಧಿಸಬೇಕು” ಎಂದು ರೈತ ಮುಖಂಡ ಚೂನಪ್ಪಾ ಪೂಜಾರಿ ಒತ್ತಾಯಿಸಿದ್ದಾರೆ.
ಲಾಠಿ ಚಾರ್ಜ್: ಪೊಲೀಸರ ಕೈಯಲ್ಲಿ ಲಾಠಿ ಇರಲಿಲ್ಲ ಅದಕ್ಕಾಗಿ ಕೆಲವು ಕೀಡಿಗೇಡಿಗಳು ಕಲ್ಲು ತೂರಿದ್ದರಿಂದ ಪರಿಸ್ಥಿತಿ ಹತೋಟಿ ಮೀರುವಂತಾಯಿತು. ಕೂಡಲೇ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಕಲ್ಲು ತೂರುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಸಾಲುಗಟ್ಟಿ ನಿಂತ ವಾಹನಗಳು: ಮೂರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದಿರುವುದರಿಂದ ಹತ್ತರಗಿ ಗೇಟ್ ಬಳಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತವು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ನೆರೆ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ಪರದಾಡಿದರು. ಇನ್ನು ಅಲ್ಲಲ್ಲಿ ವಾಹನಗಳ ನಿಂತಿರುವುದರಿಂದ ಹೋರಾಟಗಾರರ ವಿರುದ್ಧ ಕೆಲವರು ಆಕ್ರೋಶ ವ್ಯಕ್ರಪಡಿಸಿದರು.
ಹಿರಿಯ ಅಧಿಕಾರಿಗಳ ಭೇಟಿ: ಇನ್ನು ಕಲ್ಲು ತೂರಾಟದಿಂದ ಕೆಲ ಕಾಲ ವಾತಾವರಣ ಪ್ರಕ್ಷುಬ್ಧವಾಗಿತ್ತು. ಇದರಿಂದಾಗಿ ಸ್ಥಳಕ್ಕೆ ಬೆಳಗಾವಿ ಎಸ್.ಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಯಾವುದೆ ಕಾರಣಕ್ಕೆ ಕಾನೂನು ಕೈಗೆ ತೆಗೆದುಕೊಂಡರೆ ಸುಮ್ಮನೆ ಇರುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.
