ಬೀಳಗಿ: “ಬದುಕಿನಲ್ಲಿ ಜೊತೆಯಾಗಿರುತ್ತೇವೆ” ಎಂದು ಅಗ್ನಿಸಾಕ್ಷಿಯಾಗಿ ಮಾಡಿದ ಪ್ರಮಾಣವನ್ನು, ಸಾವಿನಲ್ಲೂ ಸತ್ಯವಾಗಿಸುವ ಮೂಲಕ ದಂಪತಿಯೊಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ ಹೃದಯವಿದ್ರಾವಕ ಘಟನೆ ಪಟ್ಟಣದ ಕಿಲ್ಲಾ ಓಣಿಯಲ್ಲಿ ನಡೆದಿದೆ. ವಿಧಿ ಆಡಿದ ಕ್ರೂರ ಆಟಕ್ಕೆ, ಕೆಲವೇ ಗಂಟೆಗಳ ಅಂತರದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಪ್ರಾಣ ಬಿಟ್ಟಿದ್ದು, ಇಡೀ ಪಟ್ಟಣವೇ ಕಣ್ಣೀರಲ್ಲಿ ಮುಳುಗಿದೆ.
ಕುಶಲಕರ್ಮಿಯಾಗಿದ್ದ ಶಶಿಧರ ಮನೋಹರ ಪತ್ತಾರ (40) ಎಂದಿನಂತೆ ತಮ್ಮ ಕೆಲಸವನ್ನು ಮುಗಿಸಿ ಸೋಮವಾರ ಸಂಜೆ ಮನೆಗೆ ಬಂದಿದ್ದರು. ಮನೆಯಲ್ಲಿ ತುಳಸಿ ಪೂಜೆ ಮುಗಿಸಿ, ಕುರ್ಚಿಯ ಮೇಲೆ ಆರಾಮವಾಗಿ ಕುಳಿತಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಅವರಿಗೆ ಏಳಲು ಸಾಧ್ಯವಾಗಲಿಲ್ಲ. ಕುಟುಂಬಸ್ಥರು ಆತಂಕಗೊಂಡು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು, ಆದರೆ ದಾರಿ ಮಧ್ಯದಲ್ಲಿಯೇ ಶಶಿಧರ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಅನಿರೀಕ್ಷಿತ ಆಘಾತದಿಂದ ಕುಟುಂಬಸ್ಥರು ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿತ್ತು. ತನ್ನ ಪತಿಯ ಸಾವಿನ ಸುದ್ದಿಯನ್ನು ಕೇಳಿದ ಪತ್ನಿ ಸರೋಜಾ ಶಶಿಧರ ಪತ್ತಾರ (35) ಅವರಿಗೆ ಆಘಾತವನ್ನು ತಡೆಯಲು ಸಾಧ್ಯವಾಗಲಿಲ್ಲ. ಗಂಡನ ಅಗಲಿಕೆಯ ನೋವಿನಲ್ಲಿ ಕುಸಿದುಬಿದ್ದ ಅವರು, ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದರು.
ಬದುಕಿನಲ್ಲಿ ಮಾತ್ರವಲ್ಲ, ಸಾವಿನಲ್ಲೂ ಒಂದಾದ ಈ ದಂಪತಿಯ ಕಥೆ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಪತ್ತಾರ ಅವರ ಮನೆಗೆ ದೌಡಾಯಿಸಿ, ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಮೃತ ದಂಪತಿಗೆ ಪ್ರೀತಮ್ ಮತ್ತು ಅಭಿ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳು ಅನಾಥರಾಗಿರುವುದನ್ನು ಕಂಡು ನೆರೆದವರ ಕರುಳು ಕಿತ್ತುಬಂದಂತಾಯಿತು.
ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಸದಾ ನಗುನಗುತ್ತಾ, ಅನ್ಯೋನ್ಯವಾಗಿದ್ದ ಈ ಜೋಡಿಯ ಅಂತ್ಯ ಇಷ್ಟು ದುರಂತಮಯವಾಗಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
