Home ನಮ್ಮ ಜಿಲ್ಲೆ ಬಾಗಲಕೋಟೆ ವರ್ಷಪೂರ್ತಿ ರಾಜ್ಯೋತ್ಸವ ಆಚರಿಸುವ ಏಕೈಕ ಮಠ: ನವೆಂಬರ್ ೧ರಂದು ಕನ್ನಡ ಜಾತ್ರೆ

ವರ್ಷಪೂರ್ತಿ ರಾಜ್ಯೋತ್ಸವ ಆಚರಿಸುವ ಏಕೈಕ ಮಠ: ನವೆಂಬರ್ ೧ರಂದು ಕನ್ನಡ ಜಾತ್ರೆ

0

ಪ್ರತಿ ವರ್ಷ ಭುವನೇಶ್ವರಿ ರಥೋತ್ಸವ ಎಳಿಯೋದು ಇಲ್ಲಿಯೇ – ಈ ಕನ್ನಡ ಜಾತ್ರೆಯಲ್ಲಿ ಸಾವಿರಾರು ಕನ್ನಡ ಭಕ್ತರು ಭಾಗಿ

ಆರ್ ಎಸ್ ಹಿರೇಮಠ.

ಕುಳಗೇರಿ ಕ್ರಾಸ್: ಮಠಗಳೆಂದರೆ ಪುರಾಣ-ಪ್ರವಚನ, ಪೂಜೆ-ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ ಜೊತೆಗೆ ದಾಸೋಹ ನಡೆಸುವುದು ಎಂದು ಭಾವಿಸುವುದು ಸಹಜ. ಆದರೆ ಕನ್ನಡ, ಕನ್ನಡಿಗ, ಕರ್ನಾಟಕ ಎಂದು ಕನ್ನಡದ ಕಟ್ಟಾಳು ಪೂಜ್ಯ ಶಾಂತಲಿಂಗ ಸ್ವಾಮಿಜಿ ಧಾರ್ಮಿಕ ಕಾರ್ಯಕ್ರಮ ನಡೆಸುವುದರ ಜೊತೆಗೆ ಭಾಷೆ, ನೆಲ-ಜಲ, ಹೀಗೆ ಸದ್ದಿಲ್ಲದೇ ನಮ್ಮ ಕನ್ನಡ ಉಳಿಸಿ-ಬೆಳೆಸುವಲ್ಲಿ ನೀರಂತರ ಕನ್ನಡ ಕೆಲಸ ಮಾಡುತ್ತಿರುವ ಶ್ರೀಗಳ ಕಾರ್ಯ ಕನ್ನಡಿಗರಿಗೆ ಹೆಮ್ಮೆ ತಂದಿದೆ.

ಕನ್ನಡ ಸ್ವಾಮಿಜಿ ಎಂದೇ ಖ್ಯಾತರಾದ ಶ್ರೀಗಳು ಕನ್ನಡ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕನ್ನಡ ಎಂದ ತಕ್ಷಣ ನಮಗೆಲ್ಲ ನೆನಪಾಗುವುದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ. ಈ ಮಠದ ಆವರಣದಲ್ಲಿ ನಿತ್ಯ ಕನ್ನಡ ಭಾವುಟ ಹಾರಾಡುತ್ತೆ. ಭುವನೇಶ್ವರಿಯ ಪಂಚಲೋಹದ ಮೂರ್ತಿ ಇರಿಸಲಾಗಿದ್ದು ನಿತ್ಯ ಪೂಜಿಸಲಾಗುತ್ತೆ.

ಮಠಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಮಿಸಲು ಎಂದು ತಿಳಿದಿರುವ ನಮಗೆಲ್ಲ ಭೈರನಹಟ್ಟಿ ಶ್ರೀಮಠದ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

ನಾಡಿನಾದ್ಯಂತ ನ.೧ರಂದು ರಾಜ್ಯೋತ್ಸವ ಆಚರಿಸುವುದು ಸಾಮಾನ್ಯ. ಆದರೆ ಈ ಮಠದಲ್ಲಿ ಏಕೀಕರಣ ಹೋರಾಟಗಾರರ ಪರಿಚಯಿಸುತ್ತ ವರ್ಷಪೂರ್ತಿ ರಾಜ್ಯೋತ್ಸವ ಆಚರಿಸಲಾಗುತ್ತೆ. ಅಷ್ಟೇ ಅಲ್ಲದೆ ಸಾಹಿತಿಗಳನ್ನ, ಸಾಧಕರನ್ನ ಗುರುತಿಸಿ ಸೂಪ್ತ ಪ್ರತಿಭೆಗಳನ್ನ ಬೆಳಕಿಗೆ ತರುವ ಕಾರ್ಯ ಶ್ರೀಮಠದಿಂದ ಮಾಡಲಾಗುತ್ತಿದೆ.

ಸುಮಾರು ಒಂದೂವರೇ ದಶಕಗಳ ಕಾಲ ಶ್ವೇತ ವಸ್ತ್ರದಾರಿಯಾಗಿಯೇ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ನಿತ್ಯ ಜಪ-ತಪ, ಅನುಷ್ಠಾನ ಮೂಲಕ ಭಕ್ತರ ಏಳ್ಗೆಯನ್ನೇ ಬಯಸುತ್ತಿರುವ ಪೂಜ್ಯ ಶಾಂತಲಿಂಗ ಶ್ರೀಗಳು ಶಿವಯೋಗಿ ಸಾಧಕರಲ್ಲಿ ಒಬ್ಬರು.
ಸಾಹಿತಿಗಳಾದ ಪೂಜ್ಯರು ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶ್ರೀಮಠದಲ್ಲಿ ಸಿಂದಗಿ ಶ್ರೀಶಾಂತವಿರೇಶ್ವರ ಗ್ರಂಥಾಲಯವನ್ನು ಸ್ಥಾಪಿಸಿ ಜನರಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವ ಶ್ರೀಗಳ ಪುಸ್ತಕ ಸೇವೆ ಅನನ್ಯವಾದದ್ದು.

ಬಡ ಮಕ್ಕಳಿಗೆ ಬರವಸೆಯ ಬೆಳಕು: ಶ್ರೀಗಳು ಉಚಿತ ಪ್ರಸಾದ ನಿಲಯ ಸ್ಥಾಪಿಸಿದ್ದಾರೆ. ಸಾವಿರಾರು ಬಡವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ, ಸಂಸ್ಕೃತಿ-ಸಂಸ್ಕಾರ ಕಲಿಸುತ್ತಾ ಬಡಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ಇಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ಕೃಷಿ, ಸರಕಾರಿ ಸೇವೆ ಮಾಡಿದರೆ. ಕೆಲವರು ಕಾವಿದೀಕ್ಷೆಯನ್ನು ಪಡೆದು ಮಠಾದೀಶರಾಗಿದ್ದಾರೆ. ಸದ್ಯ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಶ್ರೀಮಠದೊಂದಿಗೆ ಗಣ್ಯರ ನಂಟು: ನಾಡಿನ ಶ್ರೇಷ್ಠ ಪತ್ರಕರ್ತರಾಗಿದ್ದ ಪಾಟೀಲ ಪುಟ್ಟಪ್ಪನವರು. ಭಾವೈಕ್ಯ ಕವಿ ಇಬ್ರಾಹಿಂ ಸುತಾರವರು. ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟಿ, ಹಿರಿಯ ಸಾಹಿತಿ ಜ್ಞಾನದೇವ ದೊಡ್ಡಮೆಟಿ ಹಾಗೂ ಕಾರ್ಮಿಕ ನೇತಾರ ಡಾ.ಕೆ.ಎಸ್.ಶರ್ಮಾ ಸೇರಿದಂತೆ ಗಣ್ಯರು ಶ್ರೀಮಠದ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.

ಕಾರ್ಯಕ್ರಮ: ಪೂಜ್ಯ ಶಾಂತಲಿಂಗ ಶ್ರೀಗಳ ಸಾನಿಧ್ಯದಲ್ಲಿ ನ.೧ರಂದು ಕಾರ್ಯಕ್ರಮಗಳು ನಡೆಯಲಿದ್ದು. ಶಾಸಕ ಸಿ.ಸಿ.ಪಾಟೀಲ ಉಧ್ಘಾಟಿಸಲಿದ್ದು, ಕನ್ನಡಪರ ಚಿಂತಕರಾದ ಹುಬ್ಬಳ್ಳಿಯ ರವೀಂದ್ರ ದೊಡ್ಡಮೇಟಿ ಕನ್ನಡ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್.ಯಾವಗಲ್ ಸೇರಿದಂತೆ ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ನೂರಾರು ಕನ್ನಡಿಗರು ಆಗಮಿಸಲಿದ್ದಾರೆ. ಧಾರವಾಡ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾದ ಡಾ.ವೈ ಎಂ ಯಾಕೊಳ್ಳಿ ಅವರು ತ್ರಿಪದಿ ಸಾಹಿತ್ಯಕ್ಕೆ ಸರ್ವಜ್ಞನ ಕೊಡುಗೆ ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ತಾಯಿ ಭುವನೇಶ್ವರಿಯ ಪಂಚಲೋಹದ ಮೂರ್ತಿಯನ್ನಿರಿಸಿ ನ.೧ರಂದು ಕನ್ನಡಾಂಬೆಯ ರಥ ಎಳೆಯಲಿದ್ದಾರೆ. ಸಾವಿರಾರು ಕನ್ನಡಿಗರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version