Home ನಮ್ಮ ಜಿಲ್ಲೆ ಬಿಜೆಪಿಯೇ ಭರವಸೆಯಂದು ಜನ ನಂಬಿದ್ದಾರೆ: ಸಿಎಂ ಬೊಮ್ಮಾಯಿ

ಬಿಜೆಪಿಯೇ ಭರವಸೆಯಂದು ಜನ ನಂಬಿದ್ದಾರೆ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಬಿಜೆಪಿಗೆ ಸಮರ್ಥ ನಾಯಕತ್ವವಿದ್ದು, ಜನರು ಬಿಜೆಪಿಯೇ ಭರವಸೆ ಅಂತ ನಂಬಿದ್ದಾರೆ. ಭರವಸೆ ವಾಹನಗಳು ರಾಜ್ಯ ಸುತ್ತಿ ಬರುವಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸುನಾಮಿ ಏಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಭಾಜಪ ವತಿಯಿಂದ ಆಯೋಜಿಸಿದ್ದ ಪ್ರಗತಿ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯಾದ್ಯಂತ 130 ರಥಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಜನರಿಗೆ ತಲುಪಿಸಲು ಈ ಯಾತ್ರೆ ಆರಂಭವಾಗಿದೆ. ಹೆಣ್ಣುಮಕ್ಕಳು ಬಡವರು, ಶಾಲಾ ಮಕ್ಕಳು ಎಲ್ಲರಿಗೂ ಮಾಹಿತಿ ತಲುಪಿಸಿ‌ಜಾಗೃತಿ ಮೂಡಿಸಲಾಗುವುದು. ನವ ಕರ್ನಾಟಕದ ಮೂಲಕ ನವ ಭಾರತ ಕಟ್ಟುವ ಕೆಲಸ ಬಿಜೆಪಿಯಿಂದ‌ ಮಾತ್ರ ಸಾಧ್ಯ ಎಂದರು.
ಸಂಕಲ್ಪವೇ ಸಿದ್ದಿ
ನಮ್ಮ ಪ್ರಧಾನಿಯವರು ಹೇಳಿರುವಂತೆ ಸಂಕಲ್ಪವೇ ಸಿದ್ದಿ. ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತವೆ. ರಾಜ್ಯದ ಹಳ್ಳಿ ಹಳ್ಳಿಗಳಿಗೆ ತಲುಪುವ ಈ ವಾಹನ ಎಲ್ಲರಿಗೂ ಸಂಕಲ್ಪ ಸಿದ್ದಿ ಮಾಡುವಂತಾಗಲಿ ಎಂದರು.
ಸಮಗ್ರ ಅಭಿವೃದ್ಧಿ
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋವಿಡ್ ಸಂಕಷ್ಟದ ನಂತರ‌ ಜನ ಕಲ್ಯಾಣ ಕೆಲಸ ಮಾಡಿದೆ. ಬೆಂಗಳೂರಿನ 75 ಶಾಲೆ, ಕೆರೆಗಳ ಅಭಿವೃಧ್ದಿ, ಎಲ್ಲ ವಾರ್ಡ್ ಗಳಲ್ಲಿ ನಮ್ಮ‌ ಕ್ಲಿನಿಕ್ ಸ್ಥಾಪನೆ, ಬೆಂಗಳೂರು ಅಭಿವೃದ್ದಿಗೆ 6000 ಕೋಟಿ, ಸಬ್ ಅರ್ಬನ್ ರೈಲಿಗೆ ಕೇಂದ್ರದಿಂದ ಹಣ, ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಕೇಂದ್ರದಿಂದ ಹಣ ತಂದಿದ್ದೇವೆ. ಕೇಂದ್ರದಿಂದ ಹಣ ತರಲು ರಾಜ್ಯದ ಸಂಸದರ ಪಾತ್ರ ಮುಖ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ, ಸಬ್ ಅರ್ಬನ್ ಸೇರಿದಂತೆ ಎಲ್ಲ ಯೋಜನೆಗಳಿಗೆ ಕೇಂದ್ರದಿಂದ ಹಣ ಬಂದಿದೆ. ಈ ವಿಶ್ವದಲ್ಲಿ ಅಗ್ರನಾಯಕತ್ವ ನೀಡುವ ಕೆಲಸ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.
ಪ್ರಗತಿಯ ಯೋಜನೆಗಳು
ರಾಜ್ಯ ಸರ್ಕಾರದಿಂದ ರೈತ ವಿದ್ಯಾನಿಧಿ, ಜೊತೆಗೆ ರೈತ ಕೂಲಿ ಕಾರ್ಮಿಕರು, ಮೀನುಗಾರರು, ನೇಕಾರರ ಮಕ್ಕಳಿಗೂ ನೀಡುತ್ತಿದ್ದೇವೆ. ಸ್ವನಿಧಿ ಯೋಜನೆ ಅಡಿ ಮಹಿಳೆಯರಿಗೆ ಸಾಲ, ಯುವಕರಿಗೆ ಸ್ವಯಂ ಉದ್ಯೊಗ ನೀಡಲು ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಮಹಿಳೆಯರಿಗೆ ಉಚಿತ ಬಸ್ ಪಾಸ್, ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ ನೀಡುತ್ತಿದ್ದು ಇವೆಲ್ಲವೂ ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version