Home ಕೃಷಿ/ವಾಣಿಜ್ಯ ವಾಣಿಜ್ಯ ವಿಶೇಷ: ಆರ್ಥಿಕ ಅಭಿವೃದ್ಧಿ – ಭಾರತ ಈಗ ಆರ್ಥಿಕ ದೈತ್ಯ

ವಾಣಿಜ್ಯ ವಿಶೇಷ: ಆರ್ಥಿಕ ಅಭಿವೃದ್ಧಿ – ಭಾರತ ಈಗ ಆರ್ಥಿಕ ದೈತ್ಯ

0

ಇದು ನಮ್ಮ ದೇಶದ ಸುಯೋಗ ಎನ್ನಬಹುದು. ನಮ್ಮ ಆರ್ಥಿಕ ಪ್ರಗತಿಯ ವೇಗವನ್ನು ಬಹುರಾಷ್ಟ್ರೀಯ ವೃತ್ತಿಪರ ಸಂಸ್ಥೆಯೊಂದು ಗುರುತಿಸಿದೆ. 2038ರಲ್ಲಿ ಇಡೀ ಜಗತ್ತಿನಲ್ಲೇ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನವನ್ನು ಪಡೆಯಲಿದೆ ಎಂದು ಹೇಳಿರುವುದು ಭಾರತದ ಅರ್ಥವ್ಯವಸ್ಥೆ ಸದೃಢವಾಗಿ ಬೆಳೆಯುತ್ತಿರುವದಕ್ಕೆ ಸಾಕ್ಷಿಯಾಗಿದೆ.

ಹೌದು..! ಇತ್ತೀಚೆಗೆ ಬಹುರಾಷ್ಟ್ರೀಯ ವೃತ್ತಿಪರ ಸಂಸ್ಥೆ ಪ್ರಕಟಿಸಿರುವ ಒಂದು ವರದಿಯಲ್ಲಿ ಭಾರತವು 2038ರಲ್ಲಿ ಇಡೀ ಜಗತ್ತಿನಲ್ಲೇ ಅಭಿವೃದ್ಧಿಯಲ್ಲಿ ಎರಡನೆ ಸ್ಥಾನವನ್ನು ಪಡೆಯಲಿದೆ ಅಂತ ಒತ್ತಿ ಹೇಳಿದೆ. ಅದಕ್ಕೆ ನಿದರ್ಶನ ಎಂಬಂತೆ ಹೆಚ್ಚಿನ ಉಳಿತಾಯ, ಮತ್ತು ಹೂಡಿಕೆ ಒಂದು ಕಡೆಯಾದರೆ ಹೆಚ್ಚಿನ ಪ್ರಮಾಣದಲ್ಲಿರುವ ಯುವ ಶಕ್ತಿ ಮತ್ತು ಸುಸ್ಥಿರ-ಸದೃಢ ಆರ್ಥಿಕ ತಳಹದಿಯನ್ನು ನಿರ್ಮಿಸಿಕೊಂಡಿದ್ದು ಇನ್ನೊಂದೆಡೆ. 2038ರಲ್ಲಿ ಅದು ಆರ್ಥಿಕತೆಯಲ್ಲಿ ಅಮೆರಿಕಾ ಮತ್ತು ಚೀನಾವನ್ನು ಮೀರಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದೆಂದು ಹೇಳಿದೆ. 2030ರಲ್ಲಿ ಭಾರತ ಮತ್ತು ಅಮೆರಿಕಾಗಳ ಜಿಡಿಪಿ ಹೆಚ್ಚು ಕಡಿಮೆ ಒಂದೇ ತರಹದ ಬೆಳವಣಿಗೆ ತೋರಿಸಬಲ್ಲದೆಂದು ಅಂದಾಜಿಸಿದೆ.

ಪ್ರಸಕ್ತ ವರ್ಷ ಎಪ್ರಿಲ್‌ನಿಂದ ಜೂನ್‌ವರೆಗಿನ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ನಮ್ಮ ಆರ್ಥಿಕತೆ ಅಂದರೆ ಜಿಡಿಪಿ ಶೇ. 7.8 ರಷ್ಟು ಬೆಳವಣಿಗೆಯಾಗಿರುವುದು ಕಂಡುಬಂದಿದೆ. ಅದರಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಅಷ್ಟೊಂದು ಬೆಳವಣಿಗೆ ಉಂಟಾದ ಬಗ್ಗೆ ಮಾಹಿತಿ ಇದೆ. ಈ ವರ್ಷ ಮುಂಗಾರು ಮಳೆ ಅನಾಹುತ ಸೃಷ್ಟಿಸಿದರು ಕೂಡ ಚೆನ್ನಾಗಿಯೇ ಆಗಿದೆ. ಕೆರೆ, ಕಾಲುವೆ ಹಳ್ಳ ನದಿಗಳೆಲ್ಲ ತುಂಬಿ ತುಳುಕುತ್ತಿರುವುದರಿಂದ ಮುಂಗಾರು ಮತ್ತು ಹಿಂಗಾರು ಬೆಳೆಗಳು ಹುಲುಸಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಇದೇ ಪರಿಸ್ಥಿತಿ ಅನುಕೂಲಕರವಾಗಿ ಮುಂದುವರೆದರೆ ಒಟ್ಟು ಜಿಡಿಪಿಯು ಶೇ. 9ರಷ್ಟು ಬೆಳವಣಿಗೆ ಆಗಬಹುದೆಂದು ಅಂತಾರಾಷ್ಟ್ರೀಯ ಹಣಕಾಸಿನ ನಿಧಿ(ಐಎಂಎಫ್) ನೀಡಿದ ವರದಿ ಪ್ರಕಾರ ನಮ್ಮಲ್ಲಿ ಉಳಿತಾಯದ ಪ್ರಮಾಣ ತುಂಬಾ ಹೆಚ್ಚಾಗುತ್ತಿದೆ. 2024ರಲ್ಲಿದ್ದ ಸರಕಾರದ ಸಾಲ ಮತ್ತು ಜಿಡಿಪಿ ಅನುಪಾತ ಶೇ. 81 ರಿಂದ 2030ರ ಹೊತ್ತಿಗೆ ಶೇ. 75.8ರಷ್ಟಾಗುವ ಕುರಿತು ಹೇಳಿದೆ.

2038ರಲ್ಲಿ ಭಾರತ ನಂ.1: ಜಿಡಿಪಿಯು 2025-26ರಲ್ಲಿ ಶೇ. 6.5ರಷ್ಟು ಬೆಳವಣಿಗೆ ಆಗುವ ಭರವಸೆ ಇರಿಸಿಕೊಳ್ಳಲಾಗಿದೆ. 2025-26ರ ಪ್ರಥಮ ತ್ರೈಮಾಸಿಕವನ್ನು ತೆಗೆದುಕೊಂಡರೆ ಜಿಡಿಪಿ ಬೆಳವಣಿಗೆ ದರ ಹೆಚ್ಚಾಗಲು ಕಾರಣ ತೃತೀಯ ವಲಯ ಸ್ಥಿರ ಬೆಲೆಯಲ್ಲಿ ಶೇ. 9.3ರಷ್ಟು ಅಭಿವೃದ್ಧಿ ದಾಖಲಿಸಿದ್ದು, ಅವುಗಳೆಂದರೆ ವ್ಯಾಪಾರ, ಹೊಟೆಲ್ ಉದ್ದಿಮೆ, ಸಾರಿಗೆ ಮತ್ತು ಹಣಕಾಸಿನ ಸಂಸ್ಥೆ, ರಿಯಲ್ ಎಸ್ಟೇಟ್ ಜತೆ ರಕ್ಷಣಾ ವ್ಯವಸ್ಥೆ ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ರಂಗವು ಶೇ. 6.8 ರಷ್ಟು ಬೆಳವಣಿಗೆ ಸಾಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅಷ್ಟೆ ಅಲ್ಲ ನಮ್ಮ ಆರ್ಥಿಕ ಅಭಿವೃದ್ಧಿ 2038ರಲ್ಲಿ ಅಮೆರಿಕಾ ಮತ್ತು ಚೀನವೆರಡನ್ನು ಹಿಂದಿಕ್ಕುವ ಭವಿಷ್ಯ ಹೇಳಿದೆ. ಅದಕ್ಕೆ ಕಾರಣ ನಮ್ಮಲ್ಲಿ ದುಡಿಯುವ ವರ್ಗದ ವಯೋಮಾನದ ಸರಾಸರಿ ಈಗ 28.8ರಷ್ಟಿರುವುದರಿಂದ ದೀರ್ಘಾವಧಿ ಅಭಿವೃದ್ಧಿಗೆ ತುಂಬಾನೆ ಪೂರಕವಾಗಲಿದೆ. ಅದರಿಂದಾಗಿ 2030-31ರಲ್ಲಿ ನಮ್ಮ ಜಿಡಿಪಿಯ ಮೊತ್ತ ಡಾಲರ್ 42.2 ಲಕ್ಷ ಕೋಟಿಗೆ ತಲುಪಬಹುದೆಂದು ಅಂದಾಜಿಸಿದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು ರೂ. 36 ದಶಲಕ್ಷ ಕೋಟಿಯಷ್ಟಾಗುತ್ತದೆ.

2057ರಲ್ಲಿ ಪೂರ್ಣ ಅಭಿವೃದ್ಧಿ ದೇಶ: ಭಾರತವು 2057ರಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಹೊಂದಿದ ದೇಶವಾಗುವುದರಲ್ಲಿ ಸಂದೇಹವೇ ಇಲ್ಲ ಅಂತ ಇಂಡಿಯಾ ಮುಖ್ಯ ಆರ್ಥಿಕ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಶೇ. 50ರಷ್ಟು ಸುಂಕ ನೀತಿಯು ಭಾರತದ ಮೇಲೆ ಹೇಳಿಕೊಳ್ಳುವಷ್ಟು ಪರಿಣಾಮ ಬೀರಲಾರದೆಂದು ಅವರು ತಿಳಿಸಿದ್ದಾರೆ. ಭಾರತವು ಅಮೆರಿಕಾ ಬಿಟ್ಟು ಉಳಿದ ದೇಶಗಳಿಗೆ ತನ್ನ ವಸ್ತುಗಳನ್ನು ರಫ್ತು ಮಾಡುವ ದಾರಿಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಅಂತ ಅವರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಚೀನ, ಭಾರತ ಮತ್ತು ರಷ್ಯಾಗಳು ಮಿತ್ರ ದೇಶದಂತೆ ಒಂದಾಗುವ ಒಪ್ಪಂದವನ್ನು ಕೈಕೊಂಡಿರುವುದರಿಂದ ಅಮೆರಿಕಾದ ಬಲಗುಂದಿದಂತಾಗಿದೆ. ಹೀಗಾಗಿ ಅದು ಇನ್ನು ಕೆಲವೆ ದಿವಸಗಳಲ್ಲಿ ತನ್ನ ಸುಂಕ ನೀತಿಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಕೊನೆಯ ಹನಿ: ಅಂತೂ ಇಂತೂ ನಮ್ಮ ಆರ್ಥಿಕ ಅಭಿವೃದ್ಧಿ ದಾಖಲೆ ಮಟ್ಟ ತಲುಪುವುದರಲ್ಲಿ ಸಂದೇಹವೆ ಇಲ್ಲ. ಆಗ ನಾವು ಯಾವುದೆ ದೇಶದ ಕರುಣೆ ಅಥವಾ ಹಂಗಿನಲ್ಲಿ ಬದುಕುವ ಪ್ರಮೇಯ ಬಾರದು.ಕಾರಣ ಅಷ್ಟೊತ್ತಿಗೆ ನಾವು ಜಗತ್ತಿನಲ್ಲಿ ಒಂದು ಪ್ರಬಲ ದೇಶವಾಗಿ ಹೊರಹೊಮ್ಮುವುದರಿಂದ ನಾವೇ ನಮಗೆ ದೊಡ್ಡವರಾಗುವುದರಿಂದ ನಮ್ಮ ಆರ್ಥಿಕತೆಗೆ ಆನೆ ಬಲ ಬಂದಂತಾಗುವುದು. ಆಗ ನಾವು ಮೇರಾ ಭಾರತ್ ಮಹಾನ್ ಅಂತ ಘಂಟಾಘೋಷವಾಗಿ ಕೂಗಬಹುದು.

ಡಾ. ಎಸ್.ಡಿ. ನಾಯ್ಕ
ಆರ್ಥಿಕತಜ್ಞ, ಕೆ.ಎಚ್.ಬಿ. ಹಬ್ಬುವಾಡ, ಕಾರವಾರ

NO COMMENTS

LEAVE A REPLY

Please enter your comment!
Please enter your name here

Exit mobile version