Home ಕೃಷಿ/ವಾಣಿಜ್ಯ ಅಡಿಕೆ ಬೆಳೆಗಾರರಿಗೆ 18%, 40% ಜಿಎಸ್ಟಿ ಹೊಡೆತ

ಅಡಿಕೆ ಬೆಳೆಗಾರರಿಗೆ 18%, 40% ಜಿಎಸ್ಟಿ ಹೊಡೆತ

0

ಮಂಗಳೂರು: ಅತಿವೃಷ್ಟಿಯಿಂದ ಬೆಳೆ ನಾಶ, ಹಳದಿ ಎಲೆ ರೋಗ, ಆಮದು ಅಡಿಕೆ ಇವೆಲ್ಲದರಿಂದ ಈಗಾಗಲೇ ಕಂಗೆಟ್ಟಿರುವ ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಅಡಿಕೆ ಬೆಳೆಗಾರರು ಕೇಂದ್ರ ಸರಕಾರದ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸರಳೀಕರಣದಿಂದ ಗರಂ ಆಗಿದ್ದಾರೆ. ಮೈಲುತುತ್ತ (ಕಾಪರ್ ಸಲ್ಪೇಟ್)ದ ಮೇಲಿರುವ ಜಿಎಸ್‌ಟಿ ಶುಲ್ಕವನ್ನು ಶೇ. 18ರಷ್ಟು ಮಾಡಿರುವುದು ಹಾಗೂ ಪಾನ್ ಮಸಾಲಾ ಮೇಲಿದ್ದ ಜಿಎಸ್‌ಟಿಯನ್ನು 28%ನಿಂದ 40%ಗೆ ಏರಿಸಿರುವುದರಿಂದ ನಮಗೆ ಭಾರಿ ಪ್ರಮಾಣದ ನಷ್ಟ ಉಂಟಾಗುವುದರ ಜತೆಗೆ, ತೀವ್ರ ಆರ್ಥಿಕ ಹೊಡೆತ ಬೀಳುತ್ತದೆ ಎನ್ನುವುದು ಅಡಕೆ ಬೆಳಗಾರರ ಆತಂಕ. ಬೋರ್ಡೋ ಮಿಶ್ರಣದ ಮುಖ್ಯ ಅಂಶವಾಗಿರುವ ತಾಂತ್ರಿಕ-ಗ್ರೇಡ್ ಕಾಪರ್ ಸಲ್ಪೇಟ್ ಪ್ರಮುಖ ಕೃಷಿ ಕೀಟನಾಶಕ. ಇದನ್ನು ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.

ಅಡಕೆಯಲ್ಲಿ ಕೊಳೆ ರೋಗ ಮತ್ತು ಇತರ ಹಣ್ಣು/ಫಂಗಲ್ ರೋಗಗಳನ್ನು ತಡೆಯಲು ಇದು ಏಕೈಕ ಪರಿಣಾಮಕಾರಿ ರಕ್ಷಣೆ. ಕಾಫಿ, ಏಲಕ್ಕಿ, ರಬ್ಬರ್ ಮತ್ತು ಮೆಣಸು ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳಿಗೂ ಇದನ್ನು ಬಳಸುತ್ತಾರೆ.

`1910ರಲ್ಲಿಯೇ ಡಾ.ಲೆಸ್ಲಿ ಕೋಲ್ಮನ್ ಅವರು ಅಡಿಕೆಯ ಕೊಳೆ ರೋಗದ ಕುರಿತು ಮೊದಲ ಬಾರಿಗೆ ಪರಿಶೀಲನೆ ನಡೆಸಿದಾಗ, ತಾಮ್ರಸಲ್ಪೇಟ್ ಮಾತ್ರ ಪರಿಣಾಮಕಾರಿ ಎಂದು ಕಂಡುಬಂದಿತ್ತು. ಇದೊಂದು ಪರಿಸರಕ್ಕೆ ಪೂರಕವಾದ ಕ್ರಮವಾಗಿದ್ದು, ಮಣ್ಣಿನ ಆರೋಗ್ಯ ವೃದ್ಧಿಗೊಳಿಸಲು ಸಹ ಉಪಯೋಗವಾಗುತ್ತದೆ,’ ಎಂದು ತನ್ನ ಲೇಖನದಲ್ಲಿ ಉಲ್ಲೇಖಿಸಿದ್ದರು.

ಜಿಎಸ್‌ಟಿ ಸರಳೀಕರಣಗೊಳಿಸುವಾಗ ತಾಮ್ರ ಸಲ್ಫೇಟ್ ಮೇಲಿನ ಜಿಎಸ್‌ಟಿ ಸುಂಕವನ್ನು ಕಡಿಮೆಗೊಳಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು, ಆದರೆ ನಿರಾಸೆಯಾಗಿದೆ ಎನ್ನುತ್ತಾರೆ ಅಡಿಕೆ ಬೆಳೆಯುವ ರೈತರು. ತಾಮ್ರಸಲ್ಪೇಟ್‌ಅನ್ನು ಜಿಎಸ್‌ಟಿಯ ಚಾಪ್ಟರ್ 28 ಎಚ್‌ಎಸ್‌ಎನ್ ಕೋಡ್ 28332500 ಅಡಿಯಲ್ಲಿ ವರ್ಗೀಕರಿಸಲಾಗಿದೆ, ಇದಕ್ಕೆ ಶೇ. 18 ಜಿಎಸ್‌ಟಿ ಅನ್ವಯಿಸುತ್ತದೆ. ಆದರೆ, ಇದೇ ವೇಳೆ ಇದನ್ನು ಮೈಕ್ರೋ ನ್ಯೂಟ್ರಿಯೆಂಟ್ ಆಗಿ ವರ್ಗೀಕರಿಸಿದರೆ ಶೇ. 5 ಜಿಎಸ್‌ಟಿ ಮಾತ್ರ ವಿಧಿಸಲಾಗುತ್ತದೆ.

ಈ ಏಕೀಕರಣದ ಕೊರತೆಯ ಜೊತೆಗೆ ಕೃಷಿ-ಗ್ರೇಡ್ ತಾಮ್ರಸಲ್ಫೆಟ್‌ಗೆ ಪ್ರತ್ಯೇಕ ಎಚ್‌ಎಸ್‌ಎನ್ ಕೋಡ್ ಇಲ್ಲದಿರುವುದರಿಂದ ಗೊಂದಲ ಸೃಷ್ಟಿಯಾಗಿ ರೈತರ ಶೋಷಣೆಗೆ ಕಾರಣವಾಗಿದೆ. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಾಂತ್ರಿಕ-ಗ್ರೇಡ್ ತಾಮ್ರಸಲ್ಪೇಟ್ ಮೇಲೆ ಶೇ. 18% ಜಿಎಸ್‌ಟಿ ವಿಧಿಸುವುದು ಅಸಮಂಜಸ ಮತ್ತು ಅಸಹನೀಯ, ಇತರೆ ಎಲ್ಲಾ ಪ್ರಮುಖ ಗೊಬ್ಬರ ಮತ್ತು ಕೃಷಿ ಉತ್ಪನ್ನಗಳಿಗೆ ಶೇ. 5ರಷ್ಟು ಮಾತ್ರ ಜಿಎಸ್‌ಟಿ ಇದ್ದು, ತಾಮ್ರಸಲ್ಪೇಟ್‌ಗೆ ಮಾತ್ರ ಶೇ. 18% ಇರಿಸಿರುವುದು ಅರ್ಥವಾಗುತ್ತಿಲ್ಲ ಎಂದು ಅಡಕೆ ಬೆಳೆಗಾರರ ಹಿತರಕ್ಷಣಾ ಸಂಸ್ಥೆ ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.

ಬೆಳೆಗಾರರ ಆಕ್ರೋಶ
ಭಾರಿ ಮಳೆಯಿಂದ ಅಡಿಕೆ ಕೊಳೆತು ರೈತರು ಈಗ ಸಂಕಷ್ಟದಲ್ಲಿ ಇದ್ದಾರೆ.
ಈ ಸಮಯದಲ್ಲೇ ಕಾಪರ್ ಸಲ್ಪೇಟ್ ಜಿಎಸ್‌ಟಿ 18% ಮಾಡಿರುವುದು ಅಸಮಂಜಸ ಹಾಗೂ ಅಸಹನೀಯ
ಇತರ ಎಲ್ಲಾ ಕೃಷಿಯ ಉತ್ಪನ್ನಗಳ ಜಿಎಸ್‌ಟಿ 5% ಇದೆ, ಆದರೆ ಕಾಪರ್ ಸಲ್ಪೇಟ್‌ಗೆ ಮಾತ್ರ 18% ಏಕೆ?
ಇದರ ಹಿಂದಿನ ಕಾರಣ ಏನು ಎಂದೇ ನಮಗೆ ಅರ್ಥವಾಗುತ್ತಿಲ್ಲ: ಬೆಳೆಗಾರರು

ಬೀಡಿ ಜಿಎಸ್‌ಟಿ ಇಳಿಕೆ, ಕಾಪರ್ ಸಲ್ಫೇಟ್ ಏರಿಕೆ: “ಬೀಡಿ ಮೇಲಿನ ಜಿಎಸ್‌ಟಿ 18ಕ್ಕೆ ಇಳಿಸಿದ್ದಾರೆ. ಆದರೆ ಅಡಿಕೆಗೆ ಸಂಬಂಧಿಸಿದ ವಸ್ತುಗಳ ಜಿಎಸ್‌ಟಿ ಏರಿಸಿದ್ದಾರೆ. ಮಳೆಯಿಂದ ಬೆಳೆ ಕಾಪಾಡಲು ಮೂರು ಸಲ ಕಾಪರ್ ಸಲ್ಫೇಟ್ ಬಳಸಬೇಕಾಗುತ್ತದೆ. ಅದಕ್ಕೆ ಇಷ್ಟೊಂದು ದುಬಾರಿ ಜಿಎಸ್‌ಟಿ ವಿಧಿಸಿದರೆ ರೈತರ ಬದುಕು ಕಷ್ಟವಾಗಲಿದೆ” ಎಂದು ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version