ಕೆ.ವಿ.ಪರಮೇಶ್
ಸಿದ್ದರಾಮಯ್ಯ ಸರ್ಕಾರ ನವೆಂಬರ್‌ಗೆ ಎರಡೂವರೆ ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಸಂಪುಟಕ್ಕೆ ಸರ್ಜರಿ ಬಹುತೇಕ ಖಾತ್ರಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಸಚಿವರ ಮೌಲ್ಯಮಾಪನ ಸದ್ದಿಲ್ಲದೆ ನಡೆದಿದೆ. ಈ ಸರ್ವೇಯೇ ಕ್ಯಾಬಿನೆಟ್‌ನಿಂದ ಜಾಗ ಖಾಲಿಮಾಡುವ ಸಚಿವರು ಯಾರು? ಎಂಬುದಕ್ಕೆ ಮಾನದಂಡವಾಗಲಿದೆ ಎನ್ನಲಾಗುತ್ತಿದೆ.
ಏತನ್ಮಧ್ಯೆ ಅ.13ಕ್ಕೆ ಸಿಎಂ ಸಚಿವರ ಭೋಜನ ಕೂಟವನ್ನು ಕರೆದಿದ್ದಾರೆ. ನವೆಂಬರ್ ಕ್ರಾಂತಿ ಏನು?, ಹೇಗಿರಲಿದೆ? ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಅದು ನಾಯಕತ್ವ ಬದಲಾವಣೆಯೋ? ಅಥವಾ ಕೇವಲ ಸಚಿವಸಂಪುಟ ಪುನಾರಚನೆಯೋ? ಎಂಬುದು ಕೈ ಪಾಳೆಯದಲ್ಲಿ ಯಾರೊಬ್ಬರಿಗೂ ನಿಲುಕದ ಸಂಗತಿಯಾಗಿದೆ.
ಆದರೆ, ದೆಹಲಿ ವರಿಷ್ಠರಿಗೆ ಸಂಪುಟಕ್ಕೆ ಸರ್ಜರಿ ನಡೆಸುವ ಬಗ್ಗೆ ಸ್ಪಷ್ಟ ನಿರ್ಧಾರವಿದೆ. ಇದಕ್ಕೆ ಪೂರ್ವಸಿದ್ಧತೆ ಎನ್ನುವಂತೆ ಮಂತ್ರಿಗಳ ಮೌಲ್ಯಮಾಪನಕ್ಕೆ ಕೈ ಹಾಕಿದ್ದಾರೆ. ಇದರ ಸ್ವರೂಪ ಒಂದು ರೀತಿ ಪಾತಾಳಗರಡಿಯಂತಿದೆ. ಎರಡೂವರೆ ವರ್ಷಗಳಲ್ಲಿ ಸಚಿವರು ಮಾಡಿದ್ದೇನು? ಎನ್ನುವುದರ ಬಗ್ಗೆ ಖುದ್ದು ಫೀಲ್ಡಿಗಿಳಿದು ಮಾಹಿತಿ ಕಲೆಹಾಕಲಾಗುತ್ತಿದೆ.
ಇವೇ ಮಾನದಂಡ
- ಸರ್ಕಾರ, ಪಕ್ಷದೊಳಗೆ ಮಂತ್ರಿಗಳ ಕಾರ್ಯವೈಖರಿ
- ಮತದಾರರು, ಕಾರ್ಯಕರ್ತರ ಜತೆಗಿನ ಸಂಬಂಧ
- ಉಸ್ತುವಾರಿ ಸಚಿವರ ಕಾರ್ಯವ್ಯಾಪ್ತಿ ಪರಿಶೀಲನೆ
- ಸಚಿವರ ಕಾರ್ಯವ್ಯಾಪ್ತಿ ಕ್ಷೇತ್ರಕ್ಕಷ್ಟೇ ಸೀಮಿತವೋ, ರಾಜ್ಯಕ್ಕೂ ವಿಸ್ತರಿಸಿದೆಯೋ?
- ಇಲಾಖೆ ನಿರ್ವಹಣೆಯಲ್ಲಿ ಸಚಿವರು ಎಷ್ಟು ಹಿಡಿತ ಸಾಧಿಸಿದ್ದಾರೆ ಮಾ
- ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಂತ್ರಿಗಳು ಪ್ರಚಾರ ಮಾಡಿರುವ ಕುರಿತು ಮಾಹಿತಿ ಸಂಗ್ರಹ
ಯಾರಿಂದ ಮಾಹಿತಿ ಸಂಗ್ರಹ?: ಖಾಸಗಿ ಏಜೆನ್ಸಿಗಳ ಮೂಲಕ ಎಲ್ಲಾ ಜಿಲ್ಲೆಗಳಲ್ಲಿಯೂ ಮಂತ್ರಿಗಳ ಕಾರ್ಯಶೈಲಿ, ಸಾಧನೆ, ಸಂಪರ್ಕಗಳ ಮೌಲ್ಯಮಾಪನ ನಡೆದಿದೆ. ವಿಶೇಷವಾಗಿ ವಿವಿಧ ಕ್ಷೇತ್ರಗಳ ಗಣ್ಯರಿಂದ ಅಭಿಪ್ರಾಯ ಪಡೆಯಲಾಗುತ್ತಿದೆ. ಆಯಾ ಜಿಲ್ಲೆಗಳ ರೈತ ಮುಖಂಡರು, ಕೈಗಾರಿಕೋದ್ಯಮಿಗಳು, ವರ್ತಕರು, ವಿದ್ಯಾರ್ಥಿ ಸಮೂಹ, ಯುವಕ ಸಂಘಗಳು, ಪಕ್ಷದ ಕಾರ್ಯಕರ್ತರು, ಆಟೋ ಚಾಲಕರು, ಗೃಹಿಣಿಯರು, ಸರ್ಕಾರಿ/ ಖಾಸಗಿ ಉದ್ಯೋಗಿಗಳು ಜೊತೆಗೂ ಸಮೀಕ್ಷಾ ತಂಡಗಳು ಅತ್ಯಂತ ರಹಸ್ಯ ರೀತಿಯಲ್ಲೇ ಸಂಪರ್ಕ ಸಾಧಿಸುತ್ತಿರುವುದು ವಿಶೇಷವಾಗಿದೆ.
ಮೌಲ್ಯಮಾಪನಕ್ಕೆ ಮಾನದಂಡ: ಎಲ್ಲಾ ಸಚಿವರಗಳು ಸಾಧನೆಯ ಮೌಲ್ಯಮಾಪನಕ್ಕೆ ಈ ಬಾರಿ ಅನೇಕ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಮಂತ್ರಿಗಳ ಕಾರ್ಯವೈಖರಿ ಸರ್ಕಾರದಲ್ಲಿ ಹಾಗೂ ಪಕ್ಷದೊಳಗೆ ಹೇಗಿದೆ?, ಮತದಾರರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಇಟ್ಟುಕೊಂಡಿರುವ ಸಂಬಂಧ?, ಉಸ್ತುವಾರಿ ಸಚಿವರ ಕಾರ್ಯವ್ಯಾಪ್ತಿ ಕೇವಲ ಕ್ಷೇತ್ರಕ್ಕೆ ಸೀಮಿತವಾಗಿದೆಯಾ? ಅಥವಾ ರಾಜ್ಯಕ್ಕೆ ವಿಸ್ತರಿಸಲ್ಪಟ್ಟಿದೆಯೇ?, ಇಲಾಖೆಯ ನಿರ್ವಹಣೆಯಲ್ಲಿ ಹಿಡಿತ ಸಾಧಿಸಿದ್ದಾರಾ? ಗ್ಯಾರಂಟಿ ಯೋಜನೆಗಳ ಬಗ್ಗೆ ಎಷ್ಟರಪಟ್ಟಿಗೆ ಆಸಕ್ತಿ ಹೊಂದಿ ಪ್ರಚುರಪಡಿಸುತ್ತಿದ್ದಾರೆ?, ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆಯೇ? ಎಂಬೆಲ್ಲ ಅಂಶಗಳನ್ನು ಪರಿಗಣಿಸಿಯೇ ವಾಸ್ತವಿಕ ಮೌಲ್ಯಮಾಪನ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ದೆಹಲಿ ವರಿಷ್ಠರ ಸೂಚನೆಯಂತೆ ನಡೆಯುತ್ತಿರುವ ಈ ಸಾಧನೆ ಸರ್ವೆಯೇ ನವೆಂಬರ್‌ನಲ್ಲಿ ಸಚಿವರ ಕುರ್ಚಿ ಅಳಿವು-ಉಳಿವನ್ನು ನಿರ್ಧರಿಸುವುದು ಖಚಿತ. ಮುಂದಿನ ಎರಡೂವರೆ ವರ್ಷಗಳಲ್ಲಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ 2028ರ ಚುನಾವಣೆಗೆ ಬಲಿಷ್ಠ ತಂಡವನ್ನು ಸಜ್ಜುಗೊಳಿಸುವುದು ಕೂಡಾ ಈ ಮೌಲ್ಯಮಾಪನದ ಹಿಂದಿರುವ ಸ್ಪಷ್ಟ ಉದ್ದೇಶ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈ ಸಮೀಕ್ಷೆ ಮೂಲ ದೆಹಲಿದ್ದೇ ಆಗಿದ್ದು ಪೂರ್ಣಗೊಂಡ ಮೌಲ್ಯದ ಹೂರಣ ನೇರವಾಗಿ ಹೈಕಮಾಂಡ್‌ಗೆ ರವಾನಿಲ್ಪಡಲಿದೆ ಎನ್ನುವುದು ಮೂಲಗಳ ಮಾಹಿತಿಯಾಗಿದೆ.